ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
3 ವರ್ಷಗಳಿಂದ ಪ್ರೀತಿ ಮಾಡಿ, ಮನೆಯವರ ಒಪ್ಪಿಗೆ ಪಡೆದು, ಇನ್ನೇನು ನವಜೀವನಕ್ಕೆ ಕಾಲಿಡಬೇಕೆನ್ನುವ ಹೊತ್ತಿನಲ್ಲಿ ವಧು ಮತ್ತು ವರನ ಕಡೆಯವರು ಮದುವೆಯನ್ನೇ ಹಾಳು ಮಾಡಿರುವ ಆಘಾತಕಾರಿ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಳದಲ್ಲಿ ನಡೆದಿದೆ.ಮುದಾಸಿರ್ ಮತ್ತು ಗುಲ್ನಾಜ್ ಬಾನು ಎಂಬುವರು 3 ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ಇಬ್ಬರ ಮನೆಯವರಿಂದಲೂ ಒಪ್ಪಿಗೆ ಪಡೆದುಕೊಂಡು ಪಟ್ಟಣದ ಆರ್.ಎಂ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯಿಸಿದ್ದರು. ಆದರೆ ವಿಧಿಯಾಟದಿಂದಾಗಿ ಕಲ್ಯಾಣ ಮಂಟಪದಲ್ಲಿದ್ದ ಸಂಬಂಧಿಕರು ಪರಸ್ಪರ ಹಲ್ಲೆ ನಡೆಸಿ, ಘಾಸಿಗೊಳಿಸಿ ಮದುವೆಯನ್ನೇ ಮುರಿದುಬೀಳುವಂತೆ ಮಾಡಿದ್ದಾರೆ.
ಏನಿದು ಘಟನೆ:3 ವರ್ಷಗಳಿಂದ ಪ್ರೀತಿ ಮಾಡಿದ್ದ ಮುದಾಸಿರ್ ಮತ್ತು ಗುಲ್ನಾಜ್ ಮದುವೆಯು ಬುಧವಾರ ಕೊಳ್ಳೇಗಾಲ ಪಟ್ಟಣದ ಕುರುಬನ ಕಟ್ಟೆ ರಸ್ತೆಯಲ್ಲಿನ ಆರ್.ಎಂ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ಆದರೆ, ವಧುವಿಗೆ ಮಾತಿನಂತೆ ಕೊಡಬೇಕಿದ್ದ ಚಿನ್ನಾಭರಣ ಕೊಡದ ಹಿನ್ನೆಲೆಯಲ್ಲಿ, ಹುಡುಗಿ ಮನೆಯವರು ರಾತ್ರಿಯೇ ಶಾಸ್ತ್ರ ನಿಲ್ಲಿಸಿದ್ದಾರೆ. ಪರಿಣಾಮ ವಧು ಹಾಗೂ ವರನ ಕಡೆಯವರು ಬುಧವಾರ ಮಾತುಕತೆ ಆರಂಭಿಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಚಾಕು, ಬಡಿಗೆಯಿಂದ ಹಲ್ಲೆ:
ಮಾತಿನಂತೆ ಕೊಡಬೇಕಾಗಿದ್ದ ಚಿನ್ನಾಭರಣ ಕೊಡದ ಹಿನ್ನೆಲೆಯಲ್ಲಿ ಬುಧವಾರ ಮಾತುಕತೆ ವೇಳೆ ಸಣ್ಣದಾಗಿ ಗಲಾಟೆ ಆರಂಭವಾಗಿದೆ. ಮಾತುಕತೆ ನಡೆಯುವಾಗ ಕುಪಿತಕೊಂಡ ವಧು-ವರರ ಸಂಬಂಧಿಕರು ಚಾಕು, ದೊಣ್ಣೆಗಳಿಂದ ಒಬ್ಬರಿಗೊಬ್ಬರು ಚುಚ್ಚಿ, ಹೊಡೆದಾಡಿಕೊಂಡಿದ್ದಾರೆ. ವರನ ಸೋದರ ಸಂಬಂಧಿಗಳಾದ ಸಮೀರ್ ಆಯಾಜ್ (32), ಶೋಯೆಬ್ (30) ಹಾಗೂ ವಧುವಿನ ಸಂಬಂಧಿಗಳಾದ ಫೈರೋಜ್ ಖಾನ್ (36), ಅಬ್ದುಲ್ ವಾಯಿದ್ (44) ಹಾಗೂ ಅಬ್ದುಲ್ ಆರೀಫ್ (40) ಸೇರಿ 6 ಮಂದಿ ಗಾಯಗೊಂಡವರು. ರಕ್ತದ ಮಡುವಿನಲ್ಲಿ ಬಿದ್ದವರನ್ನು ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಮತ್ತು ಚಾಮರಾಜನಗರ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ.
ವಿಷಯ ತಿಳಿದ ತಕ್ಷಣ ಕೊಳ್ಳೇಗಾಲ ಪಟ್ಟಣ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಧು ಹಾಗೂ ವರನ ಕಡೆಯವರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಲಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಮಾತನಾಡಿ, ವಧು-ವರನ ಕುಟುಂಬಗಳ ನಡುವೆ ಗಲಾಟೆ ಆಗಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರೂ ಪ್ರೀತಿಸುತ್ತಿದ್ದರು. ವರ ಮುದಾಸಿರ್ ವೆಲ್ಡಿಂಗ್ ವರ್ಕ್ ಮಾಡಿಕೊಂಡಿದ್ದು, ಮನೆಯವರನ್ನು ಒಪ್ಪಿಸಿ ಮದುವೆ ನಿಶ್ಚಯಯಿಸಿದ್ದ. ಆದರೆ, ಮಾತಿನಂತೆ ವರನ ಕಡೆಯವರು ಚಿನ್ನಾಭರಣ ನೀಡಿಲ್ಲ ಎಂದು ಮಂಗಳವಾರ ರಾತ್ರಿಯೇ ಮನಸ್ತಾಪ ಉಂಟಾಗಿದೆ. ಪರಿಣಾಮ ವಿವಾಹ ಪೂರ್ವ ಶಾಸ್ತ್ರಗಳು ನಡೆದಿಲ್ಲ. ಇದರಿಂದಾಗಿ ವರನ ಕಡೆಯವರು ಬುಧವಾರ ಬೆಳಗ್ಗೆ ಮದುವೆ ಮಾಡಿಕೊಡಿ ಎಂದು ವಧುವಿನ ಮನೆಗೆ ತೆರಳಿದ್ದಾರೆ. ಈ ವೇಳೆ ಮಾರಾಮಾರಿ ಆಗಿದೆ. ಕೊಳ್ಳೇಗಾಲ ಪೊಲೀಸರು ಈಗಾಗಲೇ ದೂರಿನ ಅನ್ವಯ ಕೊಲೆ ಯತ್ನ ಪ್ರಕರಣ ದಾಖಲು ಮಾಡಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಗಲಾಟೆ ಮಾಡಿದವರನ್ನು ಬಂಧಿಸಲಾಗುತ್ತದೆ. ಸದ್ಯ, ಎರಡೂ ಮನೆಗಳ ಬಳಿಯೂ ಪೊಲೀಸರನ್ನು ನಿಯೋಜಿಸಿದ್ದು, ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದೇವೆ ಎಂದರು.
---ನಾವು ಯಾವುದೇ ರೀತಿಯ ಬೇಡಿಕೆ ಇಟ್ಟಿಲ್ಲ. ಅವರೇ (ವರ), ಬೇಡಿಕೆ ಇಟ್ಟು ಮೊದಲು ಹಲ್ಲೆ ಮಾಡಿದ್ದಾರೆ. 15 ಲಕ್ಷದ ಕಾರು ಬೇಕು ಎಂದು ಕೇಳಿದ್ದರು. ಯಾರೂ ಕೂಡ ಹುಡುಗಿ ಮನೆಯವರು ಡಿಮ್ಯಾಂಡ್ ಮಾಡಲ್ಲ. ಮುದಾಸಿರ್ ನನ್ನ ಬಳಿ ಒಂದು ಮಾತು, ಅವರ ಮನೆಯವರ ಬಳಿ ಒಂದು ಮಾತು, ಇನ್ನೊಬ್ಬರ ಹತ್ತಿರ ಇನ್ನೊಂದು ಮಾತು ಆಡಿದ್ದಾನೆ. ಅವರೇ ಮೊದಲು ನಮ್ಮ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ.ಗುಲ್ನಾಜ್ ಬಾನು, ವಧು
---ವರ ಬಡವನೆಂಬ ಕಾರಣಕ್ಕೆ ಸಣ್ಣ ನೆಪ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ. ಈಗ ನಾವು ಹಣವನ್ನು ಹೊಂದಿಸಿಕೊಂಡು ಅವರು ಕೇಳಿದಷ್ಟು ಚಿನ್ನಾಭರಣ ಹಾಕಲು ತಯಾರಾಗಿದ್ದೇವೆ. ಆದರೆ, ಅವರಿಗೇ ಇಷ್ಟವಿಲ್ಲ. ಮಾತುಕತೆಗೆ ಹೋದವರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.
- ಮಹಮ್ಮದ್ ಕಿಜರ್, ವರನ ಸಂಬಂಧಿ.