ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಅಂತಹ ಪರೀಕ್ಷೆಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂದು ಈಗಾಗಲೇ ನಿಮಗೆ ತಿಳಿದಿದೆ. ಈ ತರಬೇತಿ ಕೇಂದ್ರವು ಅಭ್ಯರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದೆ. ಈ ತರಬೇತಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ, ನಿಮಗೂ ಸಾರ್ವಜನಿಕ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಮರ್ಪಣೆಯೊಂದಿಗೆ ನಿರಂತರ ಅಭ್ಯಾಸ ಅತ್ಯಗತ್ಯ. ಕನಿಷ್ಠ 3 ವರ್ಷ ನೀವು ಕಷ್ಟಪಟ್ಟರೇ ಮುಂದಿನ 30 ವರ್ಷ ಸುಖವಾಗಿರಬಹುದು ಎಂದು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ಬಿ.ಎನ್. ವೀಣಾ ಕಿವಿಮಾತು ಹೇಳಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಅಂತಹ ಪರೀಕ್ಷೆಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂದು ಈಗಾಗಲೇ ನಿಮಗೆ ತಿಳಿದಿದೆ. ಈ ತರಬೇತಿ ಕೇಂದ್ರವು ಅಭ್ಯರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದೆ. ಈ ತರಬೇತಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ, ನಿಮಗೂ ಸಾರ್ವಜನಿಕ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ ಎಂದರು.ಓದುವಾಗ ಯಾವಾಗಲೂ ಒಬ್ಬ ವ್ಯಕ್ತಿಯನ್ನು ಮಾದರಿಯನ್ನಾಗಿ ಇರಿಸಿಕೊಳ್ಳಬೇಕು. ಆವಾಗ ನಿಮಗೆ ಓದಲು ಆಸಕ್ತಿ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಜಗತ್ತು ಸಾಗರದಂತೆ. ಇವತ್ತಿನ ಸ್ಪರ್ಧಾತ್ಮಕ ಪರೀಕ್ಷೆ ಸಹ ಮೊದಲಿನಂತಿಲ್ಲ. ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿದೆ. ಇದೆಲ್ಲದಕ್ಕೂ ನೀವು ಸಿದ್ಧರಾಗಿರಬೇಕು. ನಿರಂತರ ಅಭ್ಯಾಸ ಇಟ್ಟುಕೊಂಡು, ಸತತವಾಗಿ ಕಠಿಣ ಪರಿಶ್ರಮ ಪಡಿ. ಪರಿಶ್ರಮ ಇಲ್ಲದಿದ್ದರೆ ಯಾವ ಪರೀಕ್ಷೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ನಿಮಗೆಲ್ಲರಿಗೂ ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಸಿಗಲಿ. ಸೇವೆಗೆ ಆಯ್ಕೆಯಾದಾಗ ಜನಪರವಾಗಿ ಕಾರ್ಯ ನಿರ್ವಹಿಸಬೇಕು. ಹೀಗಾಗಿ, ಮಾನವೀಯತೆಯನ್ನು ಈಗಿನಿಂದಲೇ ಅಳವಡಿಸಿಕೊಳ್ಳಿ. ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಡಬೇಕು. ಗೆಲುವು ಸೋಲು ಎನ್ನುವುದು ಇಲ್ಲಿಲ್ಲ. ಸೋತರೆ ತಲೆಕೆಡಿಸಿಕೊಳ್ಳಬಾರದು. ನಿರಂತರ ಪ್ರಯತ್ನ ಪಡಬೇಕು. ಆವಾಗ ಗೆಲುವು ನಿಶ್ಚಿತ ಎಂದರು.ವಿಶ್ಲೇಷಿಸಿ ಅಭ್ಯಾಸ ಮಾಡಿ
ವಾಣಿಜ್ಯ ತೆರಿಗೆ ಇಲಾಖೆಯ ಮೈಸೂರು ವಿಭಾಗದ ಜಂಟಿ ಆಯುಕ್ತ ಎಂ. ಬಾಲಸುಬ್ರಹ್ಮಣ್ಯ ಶುಭ ಹಾರೈಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ದೂರದ ಪಯಣ ಇದ್ದಂತೆ. ಇಲ್ಲಿ ಪರಿಶ್ರಮ ಮುಖ್ಯ. ಪರೀಕ್ಷೆಗೆ ತಯಾರಿ ನಡೆಸುವಾಗ ಓದುವುದರ ಜತೆಗೆ ನೋಟ್ಸ್ ಮಾಡಿಟ್ಟುಕೊಳ್ಳಿ. ಹಳೆಯ ಪ್ರಶ್ನೆಪತ್ರಿಕೆಗಳನ್ನು ಓದಿ, ವಿಶ್ಲೇಷಿಸಿ. ನಿಮಗೆ ಹೇಗೆ ಅನುಕೂಲವಾಗುತ್ತದೆಯೋ ಹಾಗೆಯೇ ಅಭ್ಯಾಸ ಮಾಡಿ ಎಂದರು.ಜೊತೆಗೆ ಸಂವಹನ ಕೌಶಲ್ಯ ಅಳವಡಿಸಿಕೊಳ್ಳಿ. ಇಲ್ಲಿನ ತರಬೇತಿಯು ನಿಮಗೆ ಸಾಕಷ್ಟು ಕಲಿಸಿದೆ, ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಎಷ್ಟು ಗಂಟೆಗಳ ಕಾಲ ಓದುತ್ತೀರ, ಹೇಗೆ ಓದುತ್ತೀರ ಎನ್ನುವುದು ಮುಖ್ಯ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಈಗಾಗಲೆ ತಮಗೆಲ್ಲಾ ಓದುವ ತಯಾರಿ ಗೊತ್ತಾಗಿದೆ. ಧೈರ್ಯ ಇಟ್ಟುಕೊಳ್ಳಿ. ಧೈರ್ಯ ಇದ್ದರೆ ಏನನ್ನಾದರೂ ಸಾಧಿಸಬಹುದು. ಸಮಾಜದಲ್ಲಿ ನ್ಯಾಯಯುತ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಗುರಿ ಇಟ್ಟುಕೊಳ್ಳಿ, ನಂತರ ತಯಾರಿ ನಡೆಸಿ. ಏನನ್ನಾದರೂ ಸಾಧಿಸಲು ಸತತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಶೈಕ್ಷಣಿಕ ಡೀನ್ ಪ್ರೊ. ರಾಮನಾಥಂ ನಾಯ್ಡು, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ ಮೊದಲಾದವರು ಇದ್ದರು.
ಓದುವಾಗ ಯಾವುದನ್ನೂ ಓದಬೇಕು, ಯಾವುದನ್ನು ಓದಬಾರದು ಎನ್ನುವುದನ್ನು ತಿಳಿದುಕೊಂಡರೆ ಉತ್ತಮ. ಪ್ರತಿದಿನ ಪತ್ರಿಕೆ ಓದಿ. 4-5 ವರ್ಷಗಳ ಸಮಾನ್ಯ ಜ್ಞಾನ ನಿಮಗೆ ತಿಳಿದಿರಲಿ. ಓದಲು ಸಮಯ ಇಟ್ಟುಕೊಂಡು ಕೂತಾಗ ಬೇರೆ ಬೇರೆ ಕೆಲಸಗಳ ಬಗ್ಗೆ ಗಮನ ಬೇಡ. ಊರಿನ ಹಬ್ಬ, ಸಂಬಂಧಗಳು, ಹುಟ್ಟುಹಬ್ಬ ಹೀಗೆ ಎಲ್ಲವನ್ನೂ ಬಿಟ್ಟು ಕಠಿಣ ಪರಿಶ್ರಮ ಪಡಬೇಕು.- ಬಿ.ಎನ್.ವೀಣಾ, ಹೆಚ್ಚುವರಿ ಆಯುಕ್ತೆ, ಮೈಸೂರು ಮಹಾನಗರ ಪಾಲಿಕೆ