ಉಡುಪಿ: ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮೂರು ವರ್ಷ ನಡೆಸಿದ ಆಡಳಿತ, ರಾಜ್ಯದ ಜನತೆಯ ಹಿತರಕ್ಷಣೆಯಲ್ಲಿ ಪೂರ್ಣ ವಿಫಲವಾಗಿದೆ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಚರಂಡಿ, ಆರೋಗ್ಯ, ಆರ್ಥಿಕ, ಕಾನೂನು ಸುವ್ಯವಸ್ಥೆಗಳಲ್ಲಿ ಸಿದ್ದರಾಮಯ್ಯನವರ ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರದಿಂದ ರಾಜ್ಯದ 1 ಕೋಟಿ ಮೀರಿದ ಸರ್ಕಾರಿ ಬಸ್ ಪ್ರಯಾಣಿಕರು ಗೊಂದಲದಲ್ಲಿದ್ದಾರೆ. ಸಾಲದ್ದಕ್ಕೆ ನೌಕರರಿಗೆ ಕಳೆದ 30 ತಿಂಗಳುಗಳಿಂದ ಸಂಬಳವನ್ನೇ ಸರ್ಕಾರ ಕೊಟ್ಟಿಲ್ಲ ಎಂದರೆ ಆ ಬಡವರ ಸಂಕಷ್ಟ ಕೇಳುವವರಾರು. ಒಂದೆಡೆ ಪ್ರಯಾಣಿಕರಿಗೆ ಬಸ್ಸಿಲ್ಲ, ಮತ್ತೊಂದೆಡೆ ಸಿಬ್ಬಂದಿಗಳಿಗೆ ಸಂಬಳವಿಲ್ಲ, ಅಂದರೆ ಯಾರ ಸಾಧನೆ, ಯಾವ ಸಾಧನೆ ಎಂದು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿದ್ಯುತ್ ದರ ಏರಿಕೆ, ಇ.ವಿ ವಾಹನಗಳಿಗೆ ರಾಜ್ಯದ ಮೂಲಕ ತೆರಿಗೆ ಹೇರಿಕೆ, ವಾಹನ ತೆರಿಗೆ, ನೋಂದಾವಣೆ ಶುಲ್ಕ ಏರಿಕೆ, ರೈತರ ಆರ್.ಟಿ.ಸಿ.ಗೂ ಶುಲ್ಕ ಹೆಚ್ಚಳ, ಒಟ್ಟಾರೆ, ಹಾಲಿನಿಂದ ಆಲ್ಕೋಹಾಲ್ ವರೆಗೆ ಸಿದ್ದರಾಮಯ್ಯನವರ ಸರ್ಕಾರ ಹಾಕಿದ ಬೆಲೆ ಏರಿಕೆಯ ಬರೆಯಿಂದ ರಾಜ್ಯದ ಜನತೆ ಕಂಗಲಾಗಿದ್ದಾರೆ ಎಂದು ಕೋಟ ಆಪಾದಿಸಿದ್ದಾರೆ.
ಕೇಂದ್ರ ಸರ್ಕಾರ ಕೊಡುವ 15 ನೇ ಹಣಕಾಸು ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಪಂಚಾಯತ್ ರಾಜ್ ಚುನಾವಣೆಯನ್ನು ನಡೆಸದೆ ರಾಜ್ಯ ಕೇಂದ್ರದ ಆರ್ಥಿಕ ನೆರವು ಕೈಯಾರೆ ಕಳೆದುಕೊಂಡಿತು ಎಸ್ಸಿ - ಎಸ್ಟಿ ಮೀಸಲು 60,000 ಕೋಟಿ ರು.ಗಳನ್ನು ಸಿದ್ದರಾಮಯ್ಯನವರ ಸರ್ಕಾರ ಅನ್ಯ ಕಾರ್ಯಕ್ಕೆ ಬಳಸಿ ಆಪಾದನೆಗೆ ಗುರಿಯಾಯಿತು ಎಂದು ಕೋಟ ವಿವರಿಸಿದ್ದಾರೆ.ಮನೆ ಮಂಜೂರಿಲ್ಲ: ಸಿದ್ದರಾಮಯ್ಯ ಸರ್ಕಾರ ಬಸವ ವಸತಿಯೂ ಸೇರಿದಂತೆ ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ, ಮಾತ್ರವಲ್ಲ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಸತಿ ಯೋಜನೆಯೂ ಅನುಷ್ಟಾನ ಮಾಡುತ್ತಿಲ್ಲ ಎಂದ ಮೇಲೆ ಯಾವ ಸಾಧನೆ ಎಂದು ಮುಖ್ಯಮಂತ್ರಿಗಳು ವಿವರಿಸಬೇಕೆಂದು ಕೋಟ ಆಗ್ರಹಿಸಿದರು.ಕೇಂದ್ರದ ಅಕ್ಕಿ: ಅನ್ನಭಾಗ್ಯ ನಾವು ಕೊಟ್ಟೆವು ಎಂದು ಹೇಳಿದ್ದು ಬಿಟ್ಟರೆ ರಾಜ್ಯ ಸರ್ಕಾರ ಒಂದು ಕೆಜಿ ಅಕ್ಕಿಯನ್ನು ತನ್ನ ಬೊಕ್ಕಸದಿಂದ ಬಡವರಿಗೆ ಹಂಚುತ್ತಿಲ್ಲ. ಕೇಂದ್ರ ಸರ್ಕಾರ ನೀಡಿದ ಉಚಿತ ಅಕ್ಕಿ ಬಿಟ್ಟರೆ ಸಿದ್ದರಾಮಯ್ಯ ರಾಜ್ಯ ಸರ್ಕಾರದಿಂದ ಅಕ್ಕಿ ಬಿಡುಗಡೆಯೇ ಮಾಡಿಲ್ಲ ಎಂದು ಸಂಸದ ಕೋಟ ದೂರಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆಗಲಿ ಇಎಸ್‌ಐ ಯಾಗಲಿ ರಾಜ್ಯದಲ್ಲಿ ಅನುಷ್ಠಾನವಾಗದೆ ಬಡವರಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದ ಕೋಟ ಸಿದ್ದರಾಮಯ್ಯನವರು 3 ವರ್ಷ ಅಧಿಕಾರ ನಡೆಸಿದ್ದೇ ಸಾಧನೆ ಎನ್ನುವುದಾದರೆ ಯಾರ ಆಕ್ಷೇಪವೂ ಇಲ್ಲ. ಆದರದು ಜನಪರ ಸರ್ಕಾರದ ಆಡಳಿತವಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
