ಸಾರಾಂಶ
ಬೆಂಗಳೂರು : ದೇಶದ ರಕ್ಷಣಾ ಉತ್ಪನ್ನಗಳ ಉತ್ಪಾದನೆಯು 2025-26ನೇ ಸಾಲಿನಲ್ಲಿ ದಾಖಲೆಯ 1.60 ಲಕ್ಷ ಕೋಟಿ ರು.ಗೆ ತಲುಪುವ ವಿಶ್ವಾಸವಿದ್ದು, 30,000 ಕೋಟಿ ರು.ಗೂ ಹೆಚ್ಚು ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುವ ನಿರೀಕ್ಷೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
‘ಏರೋ ಇಂಡಿಯಾ-2025’ ಕುರಿತು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2047ರ ವೇಳೆಗೆ ವಿಕಸಿತ ಭಾರತದ ಗುರಿ ಸಾಧಿಸಲು ರಫ್ತು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಖಾಸಗಿ ಕಂಪನಿಗಳು ಏರೋಸ್ಪೇಸ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು, ಹೊಸ ಕಂಪನಿಗಳನ್ನು ಸ್ಥಾಪಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ರಫ್ತಿಗೆ ಉತ್ತೇಜನ ನೀಡಲು ಲೈಸನ್ಸಿಂಗ್ ವ್ಯವಸ್ಥೆಯನ್ನು ಸರಳೀಕರಿಸಲಾಗುತ್ತಿದೆ. ಇದರಿಂದ ಈ ಉದ್ಯಮಗಳು ವೇಗವಾಗಿ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಖಾಸಗಿ ಕಂಪನಿಗಳಿಂದ ದೇಶಕ್ಕೆ ಭದ್ರತೆ ಸಿಗುವ ಜೊತೆಗೆ ಉದ್ಯೋಗವಕಾಶಗಳು ಸೃಷ್ಟಿಯಾಗಿ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ರಕ್ಷಣಾ ಉತ್ಪನ್ನಗಳನ್ನು ಉತ್ಪಾದಿಸುವ ಭಾರತೀಯ ಆರ್ಡಿನನ್ಸ್ ಫ್ಯಾಕ್ಟರಿಯನ್ನು ಕಾರ್ಪೊರೆಟ್ ಕಂಪನಿಯಾಗಿ ಬದಲಿಸಿದ ಬಳಿಕ ಅದರ ಕಾರ್ಯದಕ್ಷತೆಯಲ್ಲಿ ಭಾರಿ ಸುಧಾರಣೆ ಕಂಡಿದೆ. ಹೀಗಾಗಿ, ಖಾಸಗಿ ವಲಯದ ಕಂಪನಿಗಳ ಸಬಲೀಕರಣಕ್ಕೆ ಪ್ರಯತ್ನಿಸುತ್ತಿದ್ದೇವೆ. ರಕ್ಷಣಾ ತಂತ್ರಜ್ಞಾನದ ಅಭಿವೃದ್ಧಿಯು ನಾಗರಿಕ ವಲಯದಲ್ಲೂ ಹೊಸ ಅನ್ವೇಷಣೆಗಳಿಗೆ ದಾರಿಯಾಗುತ್ತದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2025 ಆರ್ಥಿಕತೆಯನ್ನು ಬಲಗೊಳಿಸುವ ಚಾಲಕನಾಗಿ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವ ವಿಶ್ವಾಸವಿದೆ. ಈ ಬಾರಿಯ ಏರೋ ಇಂಡಿಯಾ ಐತಿಹಾಸಿಕ ಮೈಲುಗಲ್ಲು ಆಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ಐದನೇ ತಲೆಮಾರಿನ ಯುದ್ಧ ವಿಮಾನ ‘ಎಎಂಸಿಎ’ ಅನ್ನು ದೇಶಿಯವಾಗಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಮತ್ತೊಂದೆಡೆ ಅಗ್ನಿ ಕ್ಷಿಪಣಿ, ಅಸ್ತ್ರ, ಆಕಾಶ್, ಪಿನಕಾ ಕ್ಷಿಪಣಿ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸುಧಾರಣೆ ಸಂಬಂಧಿಸಿದ ಹಲವು ಯಶಸ್ಸುಗಳನ್ನು ಸಾಧಿಸಲಾಗಿದೆ. ಒಟ್ಟಾರೆ ಭಾರತವು ಸ್ವಾವಲಂಬಿ ಮತ್ತು ಸುಭದ್ರ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ರಕ್ಷಣಾ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರಿದ್ದರು.