ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಇನ್ನೇನು ಮುಗಿಯುತ್ತಿರುವ 2024 ವರ್ಷದಲ್ಲಿ ಸಾಲು ಸಾಲು ವಂಚನೆ ಪ್ರಕರಂಗಳು ನಡೆದು ಸೈಬರ್ ಕ್ರೈಂ ವಿಭಾಗ ಮನೆಮಾತಾತು.
ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿನ ನೂರಾರು ಪ್ರಜ್ಞಾವಂತರು ಸೈಬರ್ ವಂಚನೆಗೆ ನಲುಗಿ ಹೋಗಿದ್ದಾರೆ. ಕಳೆದ ವರ್ಷಕ್ಕಿಂತ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಹಣ ಕಳೆದುಕೊಂಡಿದ್ದು ಮಾತ್ರ 4 ಪಟ್ಟು ಹೆಚ್ಚು. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿಯೇ ₹10 ಕೋಟಿಗೂ ಅಧಿಕ ಹಣ ವಂಚನೆಯಾಗಿದೆ.ಕಮಿಷನರೇಟ್ ವ್ಯಾಪ್ತಿಯಲ್ಲಿ ಜನವರಿಯಿಂದ ಡಿಸೆಂಬರ್ ( ಡಿ. 25ರ ವರೆಗೆ) 193 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ ₹ 30.76 ಕೋಟಿ ವಂಚಕರ ಪಾಲಾಗಿದೆ. ಇದರಲ್ಲಿ ಹೆಚ್ಚಾಗಿ ವಂಚನೆಗೆ ಒಳಗಾದವರು ಪ್ರಜ್ಞಾವಂತರೇ ಜಾಸ್ತಿ ಎಂಬುದು ಗಮನಾರ್ಹ ವಿಷಯ.
ಪ್ರಜ್ಞಾವಂತರೆ ಹೆಚ್ಚು:ಪೊಲೀಸರು ಸೈಬರ್ ವಂಚನೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ವಂಚನೆಗೆ ತುತ್ತಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಅನಕ್ಷರಸ್ಥರು ವಂಚನೆಗೆ ತುತ್ತಾಗುವ ಬದಲು ಪ್ರಜ್ಞಾವಂತರು, ವೈದ್ಯರು, ಟೆಕ್ಕಿಗಳು, ಶಿಕ್ಷಕರು, ಉದ್ಯಮಿಗಳು, ವ್ಯಾಪಾರಸ್ಥರು, ಪ್ರಾಧ್ಯಾಪಕರು, ಪತ್ರಕರ್ತರು, ಬ್ಯಾಂಕ್ ಅಧಿಕಾರಿಗಳೇ ಹೆಚ್ಚಾಗಿ ವಂಚಕರು ಖೆಡ್ಡಾಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ.
₹30.76 ಕೋಟಿ ವಂಚನೆ:ಹು-ಧಾ ಮಹಾನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 193 ಪ್ರಕರಣ ದಾಖಲಾಗಿ, ₹ 30.76 ಕೋಟಿ ವಂಚನೆಯಾಗಿದೆ. ವಂಚನೆಯಾದ ಒಟ್ಟು ಮೊತ್ತದಲ್ಲಿ ₹1.31 ಕೋಟಿಯಷ್ಟು ಹಣ ಮಾತ್ರ ತಡೆ ಹಿಡಿಯಲು (ಫ್ರೀಜ್) ಸಾಧ್ಯವಾಗಿದೆ.
ಈ ಬಾರಿ ವಂಚನೆಗೊಳಗಾದವರ ಸಂಖ್ಯೆ ಕಡಿಮೆಯಾದರೂ ಹಣದ ಪ್ರಮಾಣದ ಕಳೆದ ವರ್ಷಕ್ಕಿಂತಲೂ 3-4 ಪಟ್ಟು ಹೆಚ್ಚಾಗಿದೆ. 2023ರಲ್ಲಿ ಹು-ಧಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 423 ಪ್ರಕರಣ ದಾಖಲಾಗಿ ₹ 10.26 ಕೋಟಿ ವಂಚನೆಯಾಗಿತ್ತು. ಅದರಲ್ಲಿ ₹ 6.42 ಕೋಟಿ ಫ್ರೀಜ್ ಮಾಡಲಾಗಿದೆ. ಈ ಮೊತ್ತದಲ್ಲಿ ₹4.59 ಕೋಟಿ ಕಳೆದುಕೊಂಡವರಿಗೆ ಮರಳಿಸಲಾಗಿದೆ.ಡಿಜಿಟಲ್ ಅರೆಸ್ಟ್‌ಗೆ ₹10 ಕೋಟಿ:
ಪ್ರಸ್ತುತ ವರ್ಷ ಡಿಜಿಟಲ್ ಅರೆಸ್ಟ್‌ಗೆ ₹ 10 ಕೋಟಿಗೂ ಹೆಚ್ಚು ಕಳೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಎಐ, ಎಪಿಕೆ ತಂತ್ರಾಂಶದ ಫೈಲ್ ಮೂಲಕ ವಾಟ್ಸ್ಆ್ಯಪ್ ಗ್ರೂಪ್ ಹ್ಯಾಕ್ ಮಾಡಿ ವೈಯಕ್ತಿಕ ಹಾಗೂ ಬ್ಯಾಂಕ್ ಮಾಹಿತಿ ಪಡೆದು ಕೋಟ್ಯಂತರ ರುಪಾಯಿ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಪ್ರಕರಣಗಳೂ ಸಾಕಷ್ಟು ದಾಖಲಾಗಿವೆ.ಇನ್ನುಳಿದಂತೆ ಬೇರೆ ವಂಚನೆ ಪ್ರಕರಣಗಳಾದ ಬಿಟ್ ಕಾಯಿನ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವುದು, ಆನ್‌ಲೈನ್ ಲೋನ್ ಹೆಸರಲ್ಲಿ ವಂಚನೆ, ಎಪಿಕೆ, ಎಐ, ಒಟಿಪಿ, ಡೆಬಿಟ್- ಕ್ರೆಡಿಟ್ ಕಾರ್ಡ್, ನಾನಾ ಕಂಪನಿಗಳ ಹೆಸರಲ್ಲಿ ಲಿಂಕ್ ಕಳಿಸಿ ವಂಚನೆ, ಹಬ್ಬದ ಉಡುಗೊರೆಯ ಆಮಿಷ, ಎನಿಡೆಸ್ಕ್, ಟೀಮ್ ವ್ಯೂವರ್ ಸಪೋರ್ಟ್ ಸೇರಿದಂತೆ ಬಗೆಬಗೆಯ ಸ್ವರೂಪಗಳಲ್ಲಿ ವಂಚಕರು ಅಮಾಯಕರಿಂದ ಹಣ ಸುಲಿಗೆ ಮಾಡಿದ್ದಾರೆ.
ವಂಚನೆ ಹೇಗೆ?ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟೆಲಿಗ್ರಾಂ, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳಿಂದ ವೈಯಕ್ತಿಕ ಮಾಹಿತಿ ಕದಿಯುವ ವಂಚಕರು ತಮ್ಮದೇ ಆದ ಸಂಪರ್ಕ ಜಾಲದೊಂದಿಗೆ ವಿವಿಧ ರೀತಿಯಲ್ಲಿ ಹಣ ವರ್ಗಾಯಿಸಿಕೊಳ್ಳುತ್ತಾರೆ. ವಾಟ್ಸ್ಆ್ಯಪ್ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಪ್ರಚಲಿತದಲ್ಲಿರುವ ಕಂಪನಿ, ಕೊಡುಗೆ ಕುರಿತು ಹೆಸರಿನಲ್ಲಿರುವ ಲಿಂಕ್ ಕಳಿಸಿ ಅದರ ಮೂಲಕವೂ ಬ್ಯಾಂಕ್‌ಗಳ ಖಾತೆಯ ಮಾಹಿತಿ ಪಡೆದು ತಾವೇ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣಗಳು ಸಾಕಷ್ಟಿವೆ.
ಸೈಬರ್ ವಂಚನೆ ಕುರಿತು ಪೊಲೀಸರು ಜಾಗೃತಿ ಮೂಡಿಸುತ್ತಿದ್ದರೂ ಸುಶಿಕ್ಷಿತರು, ಪ್ರಜ್ಞಾವಂತರು ವಂಚಕರ ಜಾಲಕ್ಕೆ ಬಲಿಯಾಗುತ್ತಿರುವುದು ಪೊಲೀಸರ ತಲೆನೋವಿಗೆ ಕಾರಣವಾಗಿದೆ. ತನಿಖೆ ವಿಳಂಬ?ದೂರುದಾರರು 5ರಿಂದ 10 ಖಾತೆಗಳಿಂದ ವಂಚಕರಿಗೆ ಹಣ ವರ್ಗಾವಣೆ ಮಾಡುವುದರಿಂದ ಬ್ಯಾಂಕ್‌ನಿಂದ ಮಾಹಿತಿ ಪಡೆಯಲು ವಿಳಂಬವಾಗುತ್ತದೆ. ಆರೋಪಿಗಳು ಅನ್ಯ ರಾಷ್ಟ್ರಗಳಿಂದ ವಂಚನೆ ಮಾಡಿ ಅಲ್ಲಿಂದಲೇ ಹಣ ಪಡೆದಿರುವ ಪ್ರಕರಣಗಳು ನಡೆದಿವೆ. ವಾಟ್ಸ್ಆ್ಯಪ್, ಟೆಲಿಗ್ರಾಮ್‌ನಿಂದ ಕರೆ ಮಾಡುತ್ತಾರೆ. ತನಿಖೆ ಕೈಗೊಂಡಾಗ ಅವು ಅನ್ಯರಾಜ್ಯ, ವಿದೇಶಗಳಿಂದ ಕರೆ ಬಂದಿರುವುದು ಗೊತ್ತಾಗುತ್ತದೆ. ನಕಲಿ ಆ್ಯಪ್, ಸಿಮ್ ಕಾರ್ಡ್, ವೆಬ್‌ಸೈಟ್ ಬಳಕೆ ಮಾಡಿ ವಂಚನೆ ಮಾಡುತ್ತಿರುವುದರಿಂದಾಗಿ ವಂಚಕರ ಪತ್ತೆ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂಬುದು ಪೊಲೀಸರ ಮಾತು.