ಸಾರಾಂಶ
ಬೆಂಗಳೂರು : ಪ್ರತಿಷ್ಠಿತ ಕಂಪನಿಯಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಆರ್) ಹಣ ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ ಐದು ಮಂದಿಯ ಗ್ಯಾಂಗ್‌ವೊಂದನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ನಗರದ ಸುಧೀರ್, ಕಿಶೋರ್, ತೀರ್ಥ ರಿಷಿ, ವಿನಯ್ ಹಾಗೂ ಚಂದ್ರಶೇಖರ್ ಬಂಧಿತರು. ಆರೋಪಿಗಳಿಂದ 30.91 ಕೋಟಿ ರು. ಮೌಲ್ಯದ ನಕಲಿ ನೋಟುಗಳು ಮತ್ತು 23.49 ಲಕ್ಷ ರು. ನಗದು ಹಣ ಜಪ್ತಿ ಮಾಡಲಾಗಿದೆ.
ಆರೋಪಿಗಳು ತಮ್ಮದೇ ಒಂದು ಜಾಲ ಸೃಷ್ಟಿಸಿಕೊಂಡು ಟ್ರಸ್ಟ್ ಹಾಗೂ ಸಂಘ-ಸಂಸ್ಥೆಗಳ ಸದಸ್ಯರನ್ನು ಸಂಪರ್ಕಿಸಿ ಸಿಎಸ್‌ಆರ್ ಹಣದ ಕಥೆ ಹೇಳಿ ವಂಚಿಸುತ್ತಿದ್ದರು. ಈ ಸಂಬಂಧ ಕೃಷ್ಣಮೂರ್ತಿ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋ ಕರೆಯಲ್ಲಿ ನೋಟಿನ ಕಂತಗಳ ಪ್ರದರ್ಶನ: ಇನ್ನು ಆರೋಪಿಗಳು ದೂರುದಾರರಿಗೆ ನಂಬಿಕೆ ಹುಟ್ಟಿಸಲು ವಿಡಿಯೋ ಕರೆ ಮಾಡಿ ನಕಲಿ ನೋಟುಗಳ ಕಂತೆಗಳನ್ನು ಅಸಲಿ ನೋಟು ಎಂಬಂತೆ ತೋರಿಸಿದ್ದಾರೆ. ಮುಂಗಡವಾಗಿ 25 ಲಕ್ಷ ರು. ಹಣ ನೀಡುವಂತೆ ಕೃಷ್ಣಮೂರ್ತಿಗೆ ಬೇಡಿಕೆ ಇರಿಸಿದ್ದಾರೆ. ಇವರ ವರ್ತನೆ ಬಗ್ಗೆ ಅನುಮಾನಗೊಂಡ ಕೃಷ್ಣಮೂರ್ತಿ, ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು, ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಿದಾಗ 500 ರು. ಮತ್ತು 2 ಸಾವಿರ ರು. ಮುಖಬೆಲೆಯ 30.91 ಕೋಟಿ ರು. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ. ಆರೋಪಿಗಳು ಈ ನಕಲಿ ನೋಟುಗಳು ಎಲ್ಲಿ ಸಿಕ್ಕಿವೆ? ಯಾರಿಂದ ಈ ನೋಟುಗಳನ್ನು ಪಡೆದಿದ್ದರು? ಇದರ ಹಿಂದೆ ಇನ್ನೂ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಹಲವೆಡೆ ವಂಚನೆ: ಆರೋಪಿ ಸುಧೀರ್ ವಿರುದ್ಧ ಈ ಹಿಂದೆ ಬಸವನಗುಡಿ ಹಾಗೂ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಈ ವಂಚನೆ ಗ್ಯಾಂಗ್‌ನ ಪ್ರಮುಖ ಆರೋಪಿ ಎನ್ನಲಾದ ಕಿಶೋರ್ ವಿರುದ್ಧ ಮುಂಬೈನಲ್ಲಿ ವಂಚನೆ ಪ್ರಕರಣ ದಾಖಲಾಗಿವೆ. ಆರೋಪಿಯು ಮುಂಬೈನಲ್ಲಿ ನಕಲಿ ನೋಟುಗಳನ್ನು ಬಳಸಿ ಜನರನ್ನು ವಂಚಿಸಿರುವುದು ಗೊತ್ತಾಗಿದೆ. ಈ ಸಂಬಂಧ ಮುಂಬೈ ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ.
ಆರೋಪಿಗಳು ಈ ಹಿಂದೆ ರೈಸ್ ಪುಲ್ಲಿಂಗ್, ಹವಾಲಾ ದಂಧೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳಿಂದ ಯಾರಾದರೂ ವಂಚನೆ ಒಳಗಾಗಿದ್ದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?: ಇತ್ತೀಚೆಗೆ ದೂರುದಾರ ಕೃಷ್ಣಮೂರ್ತಿಗೆ ಕರೆ ಮಾಡಿದ್ದ ಆರೋಪಿಗಳು, ‘ಪ್ರತಿಷ್ಠಿತ ಕಂಪನಿಗೆ ಸೇರಿದ್ದ ನೂರು ಕೋಟಿ ರು. ನಗದು ಹಣವಿದೆ. ಇದು ಕಪ್ಪು ಹಣವಾಗಿದ್ದು, ಈ ಪೈಕಿ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್)ಯಡಿ ಟ್ರಸ್ಟ್‌ಗೆ ಹಣ ನೀಡಲಿದ್ದಾರೆ. ನಿಮಗೆ 1 ಕೋಟಿ ರು. ನಗದು ಹಣ ಕೊಡಿಸುತ್ತೇವೆ. ಇದಕ್ಕೆ ಪ್ರತಿಯಾಗಿ ನೀವು 40 ಲಕ್ಷ ರು. ನೀಡಬೇಕು. ಈ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಲು ನಮಗೆ ಶೇ.10ರಷ್ಟು ಕಮಿಷನ್ ನೀಡಬೇಕು’ ಎಂದು ಹೇಳಿದ್ದರು. ಇದಕ್ಕೆ ದೂರುದಾರರು ಒಪ್ಪಿಗೆ ಸೂಚಿಸಿದ್ದರು.