ಉಪಲೋಕಾಯುಕ್ತರಿಂದ 30 ಪ್ರಕರಣ ಇತ್ಯರ್ಥ

| Published : Nov 23 2024, 12:31 AM IST

ಸಾರಾಂಶ

ವಿಚಾರಣೆಯಲ್ಲಿ ಇತ್ಯರ್ಥಕ್ಕೆ ಗುರುತಿಸಿದ್ದ 57 ಪ್ರಕರಣಗಳಲ್ಲಿ 30 ಪ್ರಕರಣ ವಿಚಾರಣೆ ಮಾಡಿ, ಸೂಕ್ತ ನ್ಯಾಯ ತೀರ್ಮಾನದೊಂದಿಗೆ ಮುಕ್ತಾಯಗೊಳಿಸಲಾಯಿತು. ಉಳಿದಂತೆ ದೂರುದಾರರು ಗೈರುಹಾಜರು ಉಳಿದಿದ್ದ ಎಂಟು ಮತ್ತು ಹೆಚ್ಚಿನ ವಿಚಾರಣೆ, ಪೂರಕ ದಾಖಲೆಗಳ ಅಗತ್ಯತೆ ಹಿನ್ನಲೆಯ 19 ಪ್ರಕರಣ ಸೇರಿ ಒಟ್ಟು 27 ಪ್ರಕರಣಗಳನ್ನು ವಿಚಾರಣೆಗಾಗಿ ಮುಂದೂಡಲಾಯಿತು.

ಧಾರವಾಡ:

ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ತಮ್ಮಲ್ಲಿ ದಾಖಲಾದ ಪ್ರಕರಣಗಳ ಪೈಕಿ ವಿವಿಧ ಪ್ರಕರಣಗಳನ್ನು ಶುಕ್ರವಾರ ಬೆಳಗ್ಗೆಯಿಂದ ಸಂಜೆ ವರೆಗೆ ವಿಚಾರಣೆ ಮಾಡಿ 30 ಪ್ರಕರಣ ಇತ್ಯರ್ಥಗೊಳಿಸಿ, ತೀರ್ಪು ನೀಡಿದರು.

ಆಲೂರು ವೆಂಕಟರಾವ್ ಭವನದಲ್ಲಿ ವಿಚಾರಣೆಗೆ ಗುರುತಿಸಿದ್ದ 57 ಪ್ರಕರಣಗಳನ್ನು ದೂರುದಾರ ಮತ್ತು ಪ್ರತಿವಾದಿಯಾದ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದರು. ಲೋಕಾಯುಕ್ತ ವಿಚಾರಣೆ ವಿಭಾಗದ ಅಪರ ನಿಬಂಧಕರಾದ ಪಿ. ಶ್ರೀನಿವಾಸ ಪ್ರಕರಣಗಳ ಮಾಹಿತಿ ನೀಡಿದರು.

ವಿಚಾರಣೆಯಲ್ಲಿ ಇತ್ಯರ್ಥಕ್ಕೆ ಗುರುತಿಸಿದ್ದ 57 ಪ್ರಕರಣಗಳಲ್ಲಿ 30 ಪ್ರಕರಣ ವಿಚಾರಣೆ ಮಾಡಿ, ಸೂಕ್ತ ನ್ಯಾಯ ತೀರ್ಮಾನದೊಂದಿಗೆ ಮುಕ್ತಾಯಗೊಳಿಸಲಾಯಿತು. ಉಳಿದಂತೆ ದೂರುದಾರರು ಗೈರುಹಾಜರು ಉಳಿದಿದ್ದ ಎಂಟು ಮತ್ತು ಹೆಚ್ಚಿನ ವಿಚಾರಣೆ, ಪೂರಕ ದಾಖಲೆಗಳ ಅಗತ್ಯತೆ ಹಿನ್ನಲೆಯ 19 ಪ್ರಕರಣ ಸೇರಿ ಒಟ್ಟು 27 ಪ್ರಕರಣಗಳನ್ನು ವಿಚಾರಣೆಗಾಗಿ ಮುಂದೂಡಲಾಯಿತು.

ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಹನುಮಂತರಾಯ ಇದ್ದರು.

133 ಹೊಸ ದೂರು ಸ್ವೀಕಾರ:

ಶುಕ್ರವಾರ ಪ್ರಕರಣಗಳ ವಿಚಾರಣೆ ಜತೆಗೆ ಕಳೆದ ಎರಡು ದಿನ ಜಿಲ್ಲಾ ಪಂಚಾಯಿತಿಯಲ್ಲಿ ಲೋಕಾಯುಕ್ತಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 133 ದೂರು ಸ್ವೀಕಾರ ಆಗಿವೆ. ಇವುಗಳ ಪೈಕಿ 40 ಪ್ರಕರಣಗಳಲ್ಲಿ ದೂರುದಾರರು ಅರ್ಜಿ ನಮೂನೆ 1 ಮತ್ತು 2ನ್ನು ಭರ್ತಿ ಮಾಡಿ ಕೊಟ್ಟಿದ್ದಾರೆ. ಉಳಿದಂತೆ ಲೋಕಾಯುಕ್ತ ಒಳಪಡದ 93 ಅರ್ಜಿ ವಿಲೇವಾರಿ ಮಾಡಿ, ಸಂಬಂಧಿಸಿದ ಇಲಾಖೆಗಳಲ್ಲಿ ನೀಡುವಂತೆ ತಿಳಿಸಿ ವಿಲೇವಾರಿ ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.