ಸಾರಾಂಶ
ಬಿಸಿಯೂಟ ಸೇವಿಸಿದ ನಂತರ 30ಕ್ಕೂ ಅಧಿಕ ಶಾಲಾ ಮಕ್ಕಳು ಅಸ್ವಸ್ಥರಾದ ಘಟನೆ ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಿಸಿಯೂಟ ಸೇವಿಸಿದ ನಂತರ 30ಕ್ಕೂ ಅಧಿಕ ಶಾಲಾ ಮಕ್ಕಳು ಅಸ್ವಸ್ಥರಾದ ಘಟನೆ ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ಮಂಗಳವಾರ ನಡೆದಿದೆ. ನಂತರ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದ್ದರಿಂದ ಊಟ ಸೇವಿಸಿ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ಹೇಳಲಾಗುತ್ತಿದೆ.ಮಾರ್ಕಂಡೇಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮಕ್ಕಳು ಬಿಸಿಯೂಟ ಸೇವಿಸಿದ್ದರು. ಮಧ್ಯಾಹ್ನ ಬಿಸಿಯೂಟ ಸೇವಿಸಿದ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿ, ತಲೆಸುತ್ತು ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಈ ವಿಷಯ ಅರಿತ ಡಿಎಚ್ಒ ಡಾ.ಈಶ್ವರ ಗಡಾದಿ, ಡಿಡಿಪಿಐ ಲೀಲಾವತಿ ಹಿರೇಮಠ ಅವರು ಖಾಸಗಿ ಆಸ್ಪತ್ರೆಗೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಆರೋಗ್ಯವಾಗಿದ್ದಾರೆ, ಯಾವುದೇ ರೀತಿಯ ಸಮಸ್ಯೆ ಆಗಿಲ್ಲ. ಸದ್ಯ 24 ಮಕ್ಕಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
-ಲೀಲಾವತಿ ಹಿರೇಮಠ, ಡಿಡಿಪಿಐ.