ಸಾರಿಗೆ ಇಲಾಖೆಯಿಂದ ₹30ಕೋಟಿ ಆದಾಯ

| Published : Dec 07 2024, 12:30 AM IST

ಸಾರಾಂಶ

ಶಕ್ತಿಯೋಜನೆ ಮೂಲಕ ಸರ್ಕಾರಿ ಬಸ್ಸಿನಲ್ಲಿ ಪ್ರತಿದಿನ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಾಗರ

ಶಕ್ತಿಯೋಜನೆ ಮೂಲಕ ಸರ್ಕಾರಿ ಬಸ್ಸಿನಲ್ಲಿ ಪ್ರತಿದಿನ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಸಾಗರದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ನೂತನ ಸರ್ಕಾರಿ ಬಸ್ ಸಂಚಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಸಾರಿಗೆ ಇಲಾಖೆಯಿಂದ ಒಂದು ವರ್ಷಕ್ಕೆ 30 ಕೋಟಿ ಆದಾಯ ಬರುತ್ತಿದೆ. ಸಾಗರ ಘಟಕದಲ್ಲಿ ಪ್ರತಿದಿನ ಶಕ್ತಿಯೋಜನೆಯಡಿ 15ಸಾವಿರ ಜನರು ಪ್ರಯಾಣ ಮಾಡುತ್ತಿದ್ದು, 7 ಲಕ್ಷ ಆದಾಯ ಬರುತ್ತಿದೆ. ಉಚಿತ ಬಸ್ ಬಿಟ್ಟಿದ್ದರೂ ನಿಗಮಕ್ಕೆ ಆದಾಯ ಬರುವುದು ಕಡಿಮೆಯಾಗಿಲ್ಲ. ಸಾರ್ವಜನಿಕರ ಸಂಚಾರಕ್ಕೆ ಬೇಕಾದ ಎಲ್ಲ ಮಾರ್ಗಕ್ಕೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಇಲ್ಲಿಂದ ಹೆಚ್ಚಿನ ಜನರು ಹೋಗುತ್ತಿದ್ದಾರೆ. ಮಣಿಪಾಲಕ್ಕೆ ಹೋಗಿ ಅಲ್ಲಿಂದ ಮಂಗಳೂರಿಗೆ ಹೋಗಬೇಕಾಗಿತ್ತು. ಇದು ಕೆಲವೊಮ್ಮೆ ರೋಗಿಗಳಿಗೆ ಸಮಸ್ಯೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅವಕಾಶ ಕೊಟ್ಟರೆ ಸಚಿವ ಸ್ಥಾನ ನಿಭಾಯಿಸುತ್ತೇನೆ

ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಆಡಳಿತದ ಎಲ್ಲ ವಿಧಾನಗಳು ನನಗೆ ಗೊತ್ತಿದೆ. ವರಿಷ್ಠರು ಅವಕಾಶ ಕೊಟ್ಟರೆ ಸಚಿವನಾಗಿ ಉತ್ತಮ ಕೆಲಸ ಮಾಡುತ್ತೇನೆ ಎನ್ನುವ ವಿಶ್ವಾಸ ನನಗಿದೆ. ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯೂ ಇದೆ ಎಂದು ಹೇಳಿದರು.

ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದೆ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ಗೆ ಅಫಿಡವೀಟ್ ಸಲ್ಲಿಸಿದೆ. ಅದನ್ನು ತೆಗೆಸುವ ಕೆಲಸ ಕೇಂದ್ರದಿಂದ ಆಗಬೇಕು. ಡಬ್ಲೂಎಚ್ಓಗೂ ಇದನ್ನು ಕೇಂದ್ರ ಸರ್ಕಾರದ ಮೂಲಕವೇ ಮನವರಿಕೆ ಮಾಡಿಕೊಡಬೇಕು. ರಾಜ್ಯ ಸರ್ಕಾರ ತನ್ನ ಪ್ರಯತ್ನವನ್ನು ಮಾಡುತ್ತಿದೆ ಎಂದರು.

ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು, ಕಾಂಗ್ರೆಸ್ ಪ್ರಮುಖರಾದ ಸುರೇಶ್ ಬಾಬು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.