ನಕಲಿ ಚಿನ್ನಾಭರಣಗಳ ಮೇಲೆ 30 ಲಕ್ಷ ರು. ಸಾಲ ಪಡೆದು ವಂಚನೆ

| Published : Feb 29 2024, 02:04 AM IST

ಸಾರಾಂಶ

ಆರೋಪಿಗಳು ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಆಭರಣಗಳನ್ನು ಹರಾಜು ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸಂಶಯದಿಂದ ಪರಿಶೀಲಿಸಿದಾಗ ಈ ಚಿನ್ನಾಭರಣಗಳು ನಕಲಿ ಎಂದು ದೃಢಪಟ್ಟಿದೆ.

ಕನ್ನಡಪ್ರಭ ವಾರ್ತೆ ಪಡುಬಿದ್ರಿನಕಲಿ ಚಿನ್ನಾಭರಣಗಳನ್ನು ಮೂರು ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರು. ಸಾಲ ಪಡೆದು ಪಾವತಿಸದೇ ಮೋಸ ಮಾಡಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.ಆರೋಪಿಗಳನ್ನು ಪಡುಬಿದ್ರಿ ಕಂಚಿನಡ್ಕದ ರಾಘವೇಂದ್ರ ಮಠದ ಬಳಿಯ ನಿವಾಸಿ ರಾಜೀವ್ ಹಾಗೂ ಆತನ ಪತ್ನಿ ಸ್ನೇಹಲತಾ ಎಂದು ಗುರುತಿಸಲಾಗಿದೆ.

ಅವರು ಪಡುಬಿದ್ರಿಯ ಎಸ್.ಕೆ.ಜಿ.ಐ. ಕೋ ಅಪರೇಟಿವ್ ಸೊಸೈಟಿಯಲ್ಲಿ 2022ರ ಸೆ.1ರಿಂದ ಒಟ್ಟು 182 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ಅಡವಿಟ್ಟು ಸೊಸೈಟಿಗೆ ನಂಬಿಸಿ 8,08,000 ರು. ಸಾಲವನ್ನು ಪಡೆದಿದ್ದರು.ಅದೇ ರೀತಿ ಇವರು ಎಸ್‌ಸಿಡಿಸಿಸಿ ಬ್ಯಾಂಕ್ ಉಚ್ಚಿಲ ಶಾಖೆಯಲ್ಲಿ 2023ರ ಮಾ.4ರಿಂದ ಒಟ್ಟು 72.200 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂಬುದಾಗಿ ನಂಬಿಸಿ ಅಡವಿಟ್ಟು 2,86,000 ರೂ. ಸಾಲವನ್ನು ಪಡೆದಿದ್ದರು.ಇನ್ನೊಂದು ಪ್ರಕರಣದಲ್ಲಿ ಈ ದಂಪತಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ ಒಟ್ಟು 231 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂಬುದಾಗಿ ನಂಬಿಸಿ 10,29,000 ರು. ಮತ್ತು ಸೊಸೈಟಿಯ ಸಿಟಿ ಶಾಖೆಯಲ್ಲಿ ಒಟ್ಟು 188.600 ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 9,04,100ರೂ. ಸಾಲವನ್ನು ಪಡೆದು ಮರುಪಾವತಿಸದೇ ಬ್ಯಾಂಕಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.ಆರೋಪಿಗಳು ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಆಭರಣಗಳನ್ನು ಹರಾಜು ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸಂಶಯದಿಂದ ಪರಿಶೀಲಿಸಿದಾಗ ಈ ಚಿನ್ನಾಭರಣಗಳು ನಕಲಿ ಎಂದು ದೃಢಪಟ್ಟಿದೆ.

* ರೈತನಿಗೆ 7 ಲಕ್ಷ ರು. ವಂಚನೆಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಡಾ. ರಾಮಕೃಷ್ಣ ಅವರ ಮನೆಯಿಂದ ಫೆ. 3ರಂದು ಬೆಳ್ತಂಗಡಿ ನಿವಾಸಿ ಮೊಹಮ್ಮದ್ ಶರೀಫ್‌ ಸುಮಾರು 7 ಲಕ್ಷ ರು. ಮೌಲ್ಯದ 15 ಕ್ವಿಂಟಾಲ್ ಅಡಕೆಯನ್ನು ಖರೀದಿಸಿ ಹಣವನ್ನು ಖಾತೆಗೆ ಜಮಾ ಮಾಡುವುದಾಗಿ ಖಾತೆ ನಂಬರ್ ಪಡೆದುಕೊಂಡು ಹೋಗಿದ್ದರು.ಆದರೆ ಈವೆರೆಗೆ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡದೆ, ಫೋನ್‌ ಕರೆ ಮಾಡಿದರೂ ಸ್ವೀಕರಿಸದೆ ಮೋಸ ಮಾಡಿರುತ್ತಾರೆ. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.