ಸಾರಾಂಶ
ಬಳ್ಳಾರಿ: ಕಲಬುರಗಿ ಜಿಲ್ಲೆ ಸೇಡಂ ಬಳಿಯ ರಾಜ್ಯ ಹೆದ್ದಾರಿಯ ಪ್ರಕೃತಿ ನಗರದಲ್ಲಿ ಜ.29ರಿಂದ ಫೆ.6ರವರೆಗೆ 9 ದಿನಗಳ ಭಾರತೀಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಉತ್ಸವದಲ್ಲಿ ದೇಶ ವಿದೇಶದ ಸುಮಾರು 30 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಉತ್ಸವದ ಪ್ರಧಾನ ಸಂಯೋಜಕ ಬಸವರಾಜ ಪಾಟೀಲ ಸೇಡಂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಅಂಗವಾಗಿ ಭಾರತ ವಿಕಾಸ ಸಂಗಮವು 7ನೇ ಭಾರತೀಯ ಸಂಸ್ಕೃತಿ ಉತ್ಸವ ಆಯೋಜಿಸಿದೆ.ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿ ಕಲಬುರಗಿ ಇವುಗಳ ಸಹಯೋಗದಲ್ಲಿ ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಘೋಷಣೆಯಡಿ ಉತ್ಸವ ನಡೆಯಲಿದೆ. ಮಾತೃ ಸಮಾವೇಶ, ಶೈಕ್ಷಣಿಕ ಸಮಾವೇಶ, ಯುವ ಸಮಾವೇಶ, ಗ್ರಾಮ-ಕೃಷಿ ಸಮಾವೇಶ, ಆಹಾರ-ಆರೋಗ್ಯ ಸಮಾವೇಶ, ಸ್ವಯಂ ಉದ್ಯೋಗ, ಪ್ರಕೃತಿ, ಸೇವಾಶಕ್ತಿ, ದೇಶ, ಧರ್ಮ, ಸಂಸ್ಕೃತಿ ಸೇರಿದಂತೆ ವಿವಿಧ ಸಮಾವೇಶಗಳು ಜರುಗಲಿವೆ. ಕರ್ನಾಟಕ, ತೆಲಂಗಾಣ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ದೇಶದ ನಾನಾ ರಾಜ್ಯಗಳಿಂದಲೂ ಸಹ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಬರಲಿದ್ದಾರೆ. ನಾಡಿನ ಖ್ಯಾತ ಕಲಾವಿದರು, ರಾಷ್ಟ್ರಮಟ್ಟದ ಸಂಗೀತ ದಿಗ್ಗಜರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಉತ್ಸವದ ಅನುಭವ ಮಂಟಪದ ಹೆಸರಿನ 24 ಎಕರೆ ಪ್ರದೇಶದಲ್ಲಿರುವ ಬೃಹತ್ ವೇದಿಕೆಯಲ್ಲಿ ಅನೇಕ ಕಾರ್ಯಕ್ರಮಗಳು ಜರುಗಲಿವೆ. ರಾಷ್ಟ್ರದ ಶ್ರೇಷ್ಠ ವ್ಯಕ್ತಿಗಳಿಂದ ಪ್ರೇರಣಾದಾಯಕ ಉಪನ್ಯಾಸಗಳು, ಜಾಗೃತಿ ಮೂಡಿಸುವ ಉಪನ್ಯಾಸಗಳು, ವಿಶೇಷ ಚಿಂತನಾ ಸಭೆಗಳು, ದೂರಗಾಮಿ ಪರಿಣಾಮ ಬೀರುವ ಕೃಷಿ ಪದ್ಧತಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆ, ಯೋಗ ಪ್ರದರ್ಶನ, ವಿಜ್ಞಾನ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ, ಕಾರ್ಯಾಗಾರ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, 300 ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆಗಳು, 300 ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಇರಲಿವೆ.ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಮೆರಿಕಾದ ಮಾಜಿ ಉಪಾಧ್ಯಕ್ಷ ಅಲ್‌ಗೋರ್, ಮಾರಿಷಸ್ ದೇಶದ ಶಿಕ್ಷಣ ಕಾರ್ಯದರ್ಶಿ ಯುಧಿಷ್ಠಿರ ಮನ್‌ಬೋದ್, ನಾಡಿನ ಮಠಾಧೀಶರು, ಸಂತ ಮಹಾಂತರು, ಧರ್ಮದರ್ಶಿಗಳು, ಧಾರ್ಮಿಕ ಮುಖಂಡರು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಚಿಂತಕರು, ಕ್ರೀಡಾಪಟುಗಳು, ಅರ್ಜುನ್ ಪ್ರಶಸ್ತಿ ವಿಜೇತರು, ದೇಶದ 50ಕ್ಕೂ ಹೆಚ್ಚು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ದೇಶದ ಮಾಜಿ ಸೇನಾಧಿಕಾರಿಗಳು, ವಿವಿಧ ಕ್ಷೇತ್ರದ ತಜ್ಞರು ಸೇರಿದಂತೆ ನೂರಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೇಡಂ-ಕಲಬುರಗಿ ಮಾರ್ಗದ ಬೀರನಳ್ಳಿ ರಸ್ತೆಯಲ್ಲಿರುವ ಪ್ರಕೃತಿ ನಗರದ240 ಎಕರೆ ಪ್ರದೇಶದಲ್ಲಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶ-ವಿದೇಶಗಳಿಂದ ಬರುವ ಹಾಗೂ ಉತ್ಸವದಲ್ಲಿ ಭಾಗವಹಿಸುವವರಿಗೆ ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು. ಈ ಹಿಂದಿನ 6 ಉತ್ಸವಗಳ ಅನುಭವದಲ್ಲಿ 7ನೇ ಉತ್ಸವ ನಡೆಯುತ್ತಿರುವುದರಿಂದ ಜನರಿಗೆ ಸೌಕರ್ಯ ಒದಗಿಸುವ ವಿಚಾರದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಬಸವರಾಜ ಪಾಟೀಲ ಸೇಡಂ ಅವರು ಅವರು ಸ್ಪಷ್ಪಪಡಿಸಿದರು.
ಸಂಡೂರಿನ ಗಣಿ ಉದ್ಯಮಿ ಬಿ.ಕೆ.ನಾಗನಗೌಡ, ಮಾಜಿ ಮೇಯರ್ ಪಾರ್ವತಿ ಇಂದುಶೇಖರ್, ವೆಂಕಟೇಶ್ ಬಡಿಗೇರ್ ಹಾಗೂ ಅಡವಿಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.