ಕಳವಾದ 30 ಮೊಬೈಲ್‌ಗಳು ವಾರಸುದಾರರಿಗೆ ಹಸ್ತಾಂತರ

| Published : Oct 25 2024, 12:54 AM IST

ಸಾರಾಂಶ

ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳವಾದ ಬಗ್ಗೆ ದಾಖಲಾಗಿದ್ದ ದೂರುಗಳ ಆಧಾರದಲ್ಲಿ ಪತ್ತೆಹಚ್ಚಲಾದ ಮೊಬೈಲ್‌ಗಳನ್ನು ಗುರುವಾರ ಸಂತ್ರಸ್ತರಿಗೆ ನಗರ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳವಾದ ಬಗ್ಗೆ ದಾಖಲಾಗಿದ್ದ ದೂರುಗಳ ಆಧಾರದಲ್ಲಿ ಪತ್ತೆಹಚ್ಚಲಾದ ಮೊಬೈಲ್‌ಗಳನ್ನು ಗುರುವಾರ ಸಂತ್ರಸ್ತರಿಗೆ ನಗರ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.ಈ ವೇಳೆ ಮಾತನಾಡಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಮೊಬೈಲ್ ಕಳವಾದಾಗ ಜನರು ಚಿಂತಿಸಬೇಕಿಲ್ಲ. ಮೊಬೈಲನ್ನು ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿ ಪಡಿಸಿದೆ. ಕೆ.ಎಸ್.ಪಿ. ವೆಬ್‌ಸೈಟ್‌ಗೆ ಭೇಟಿ ನೀಡಿ ಇ-ಲಾಸ್ ಅಪ್ಲಿಕೇಶನ್‌ನ ಒಳಗೆ ಕಳವಾದ ಮೊಬೈಲ್‌ನ ಐಎಂಎ ನಂಬರ್ ಹಾಕಿ, ಸಿಇಐಆರ್‌ನಲ್ಲಿ ತಮ್ಮ ಸಂಪೂರ್ಣ ವಿವರವನ್ನು ಹಾಕಬೇಕು. ಇದನ್ನು ಮೊಬೈಲ್‌ನಲ್ಲೂ ಮಾಡಬಹುದು. ತಂತ್ರಜ್ಞಾನವನ್ನು ಬಳಸುವ ಬಗ್ಗೆ ಮಾಹಿತಿ ಇಲ್ಲದವರು, ಸ್ಥಳೀಯ ಠಾಣೆಗೆ ಭೇಟಿ ನೀಡಿ, ಅಲ್ಲಿಯೂ ದೂರನ್ನು ದಾಖಲಿಸಬಹುದು ಎಂದರು.ಕಳೆದುಹೋದ ಮೊಬೈಲ್‌ನಲ್ಲಿ ಬಳಸುತ್ತಿದ್ದ ಸಿಮ್‌ನ ನಂಬರನ್ನು ಇನ್ನೊಂದು ಮೊಬೈಲ್‌ಗೆ ಬಳಸಲು ಆರಂಭಿಸಿದಾಗ, ಮೆಸೇಜ್‌ ಮೂಲಕ ಕಳೆದುಹೋದ ಮೊಬೈಲ್ ಯಾರು ಬಳಸುತ್ತಿದ್ದಾರೆ ಎಂದು ತಿಳಿಯುತ್ತದೆ ಎಂದವರು ವಿವರಿಸಿದರು.ಈ ಸಂದರ್ಭ ನಗರ ಠಾಣಾ ಪೋಲಿಸ್ ನಿರೀಕ್ಷಕ ಶ್ರೀಧರ್, ಪಿಎಸ್ಐಗಳಾದ ಈರಣ್ಣ, ಭರತೇಶ್, ಸಿಬ್ಬಂದಿ ಚೇತನ್, ಬಶೀರ್, ವಿನಯ್, ಜಸ್ವ, ಗಂಗಾರಾಜ್ ಉಪಸ್ಥಿತರಿದ್ದರು. ಸುಮಾರು 30 ಸಂತ್ರಸ್ತರು ಠಾಣೆಯಿಂದ ತಮ್ಮ ಮೊಬೈಲನ್ನು ಪಡೆದುಕೊಂಡರು.