ನಿರಂತರ ಕುಡಿವ ನೀರು ₹300 ಕೋಟಿ ಅನುದಾನ- ಸಚಿವ ಶಿವರಾಜ ತಂಗಡಗಿ

| Published : Dec 23 2023, 01:45 AM IST

ಸಾರಾಂಶ

ನಗರೋತ್ಥಾನ (೪ನೇ ಹಂತ) ಯೋಜನೆಯಡಿ ₹೨.೨ ಕೋಟಿ ವೆಚ್ಚದಲ್ಲಿ ಕನಕಾಚಲ ದೇವಸ್ಥಾನದಿಂದ ಕಲ್ಮಠದವರೆಗಿನ ರಥಬೀದಿ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ನಡೆಯಬೇಕು. ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣವಾಗಿ ಮುಗಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಕಳಪೆಯಾದರೆ ಸಹಿಸುವುದಿಲ್ಲ. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇನೆ.

ಕನಕಗಿರಿ: ಮುಂದಿನ ೩೦ ವರ್ಷ ಮುಂದಾಲೋಚನೆಯಿಂದ ಕನಕಗಿರಿ, ಕಾರಟಗಿಗೆ ದಿನದ ೨೪ ಗಂಟೆ ಕುಡಿಯುವ ನೀರು ಕಲ್ಪಿಸುವ ನಿಟ್ಟಿನಲ್ಲಿ ₹೩೦೦ ಕೋಟಿಗೂ ಹೆಚ್ಚು ಅನುದಾನಕ್ಕೆ ತಾಂತ್ರಿಕ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದಿಂದ ಕಲ್ಮಠದವರೆದಿನ ರಥಬೀದಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಪತ್ರಕರ್ತರ ಜತೆ ಅವರು ಮಾತನಾಡಿದರು.

ಕನಕಗಿರಿ-ಕಾರಟಗಿಗೆ ಕುಡಿಯುವ ನೀರಿನ ಯೋಜನೆಯಿಂದ ೭೫ ಗ್ರಾಮಗಳಿಗೆ ಅನುಕೂಲವಾಗಲಿದೆ. ಬೃಹತ್ ಯೋಜನೆಗೆ ತಾಂತ್ರಿಕ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು.ನಗರೋತ್ಥಾನ (೪ನೇ ಹಂತ) ಯೋಜನೆಯಡಿ ₹೨.೨ ಕೋಟಿ ವೆಚ್ಚದಲ್ಲಿ ಕನಕಾಚಲ ದೇವಸ್ಥಾನದಿಂದ ಕಲ್ಮಠದವರೆಗಿನ ರಥಬೀದಿ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ನಡೆಯಬೇಕು. ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣವಾಗಿ ಮುಗಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಕಳಪೆಯಾದರೆ ಸಹಿಸುವುದಿಲ್ಲ. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇನೆ ಎಂದರು.ಇನ್ನು ಬೆಂಗಳೂರಿನ ದೇವನಹಳ್ಳಿ ಮಾದರಿಯಲ್ಲಿ ಜಿಲ್ಲೆಯ ತಾವರಗೇರಾ, ಕಾರಟಗಿ, ಕುಕನೂರು, ಕನಕಗಿರಿ, ಕಾರಟಗಿ ನಗರಗಳಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿಯ ಸರ್ವೇ ಕಾರ್ಯ ನಡೆದಿದೆ. ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ. ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವುದಾಗಿ ತಿಳಿಸಿದರು.ಉಪ ನೋಂದಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಎಡಿಎಲ್‌ಆರ್ ಸೇರಿದಂತೆ ತಹಶೀಲ್ ಕಚೇರಿಗೆ ಬೇಕಾದ ಎಲ್ಲ ಕಚೇರಿಗಳ ಕಾರ್ಯಾರಂಭಕ್ಕೆ ಸಂಬಂಧಿಸಿದ ಸಚಿವರ ಜತೆ ಮಾತನಾಡಿದ್ದು, ಅನುಮತಿ ಬಳಿಕ ಕಚೇರಿಗಳ ಕಾರ್ಯಾರಂಭ ಆಗಲಿದೆ ಎಂದರು.ಕನಕಗಿರಿ-ಕಾರಟಗಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ₹೩ ಕೋಟಿ ಮಂಜೂರಾಗಿದೆ. ಜಾಗವನ್ನೂ ಗುರುತಿಸಲಾಗಿದೆ. ಮುಂದಿನ ವಾರದಲ್ಲಿ ಕನಕಾಚಲಪತಿ ದೇವಸ್ಥಾನದ ಅಭಿವೃದ್ಧಿ ವಿಚಾರವಾಗಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.ರಥಬೀದಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಬಸವರಾಜ ಧಡೇಸ್ಗುರು ಹಾಗೂ ಹಾಲಿ ಶಾಸಕ, ಸಚಿವರೂ ಆದ ಶಿವರಾಜ ತಂಗಡಗಿ ಒಂದೇ ಕಾಮಗಾರಿಗೆ ಇಬ್ಬರು ಭೂಮಿಪೂಜೆ ಮಾಡಿದ್ದಾರೆ.ಈ ಕಾಮಗಾರಿಗೆ ನಾನೇ ಸಹಿ ಮಾಡಿ, ಭೂಮಿಪೂಜೆ ಮಾಡಿದ್ದೇನೆ. ಈ ಹಿಂದಿನ ಶಾಸಕರು ಕಾಮಗಾರಿಗೆ ಅನುದಾನ ನೀಡದೇ ಪೂಜೆ ಮಾಡಿ, ಕಾಮಗಾರಿಗೆ ಚಾಲನೆ ನೀಡಿದ್ದರು. ಬಿಜೆಪಿಯವರಂತೆ ನಾನು ಸುಳ್ಳು ಹೇಳುವುದಿಲ್ಲ. ನನ್ನದು, ನಮ್ಮ ಪಕ್ಷದ ಕಾರ್ಯಕ್ರಮಗಳು ಸತ್ಯ ಮತ್ತು ಅಸಲಿಯಿಂದ ಕೂಡಿರುತ್ತವೆ ಎಂದು ಸಚಿವ ತಂಗಡಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.