ಸಾರಾಂಶ
ಕಟೀಲು ಸಮೂಹ ವಿದ್ಯಾಸಂಸ್ಥೆಗಳ ಮುನ್ನೂರು ವಿದ್ಯಾರ್ಥಿಗಳು ತುಳು ಲಿಪಿ ಬರೆಯಲು ಓದಲು ಕಲಿತು ಪರೀಕ್ಷೆಯನ್ನೂ ಬರೆದಿದ್ದಾರೆ. ತುಳುಲಿಪಿ ಕಲಿತವರಿಗೆ ಪ್ರಮಾಣಪತ್ರವನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಅನೇಕ ಶಾಸ್ತ್ರಪುರಾಣಗಳನ್ನು ತುಳುವಿನಲ್ಲಿ ಬರೆಯಲಾಗಿದ್ದು, ಲಿಪಿ ಮರೆತ ಕಾರಣ ಅವುಗಳನ್ನು ಓದುವವರಿಲ್ಲವಾಗಿದೆ ಲಿಪಿಯ ಮೂಲಕ ಹಳೆಯ ತುಳು ಸಾಹಿತ್ಯ ಓದುವಂತಾಗಬೇಕು. ಹೊಸ ಬರಹಗಳು ಬರುವಂತಾಗಲಿ. ಲಿಪಿ ಕಲಿಸುವ ಜೈ ತುಳುನಾಡ್ ಸಂಘಟನೆಯ ಕಾರ್ಯಕರ್ತರ ಶ್ರಮ ಅಭಿನಂದನೀಯ ಎಂದು ಕಟೀಲು ದೇವಳದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮೂಹ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಜೈ ತುಳುನಾಡ್ ಸಂಸ್ಥೆಯ ಸಹಯೋಗದಲ್ಲಿ ಕಟೀಲು ದೇವಳ ಪದವಿಪೂರ್ವ ಕಾಲೇಜಿನ ಭಾರತಿ ಸಭಾ ಭವನದಲ್ಲಿ ಜರುಗಿದ ಬಲೆ ತುಲು ಲಿಪಿ ಕಲ್ಪುಗ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಳುನಾಡ್ ಸಂಸ್ಥೆಯ ಅಧ್ಯಕ್ಷ ಉದಯ ಪೂಂಜಾ ತಾಳಿಪಾಡಿಗುತ್ತು ವಹಿಸಿದ್ದರು. ಸಂಘಟನೆಯ ಸದಸ್ಯರು ತುಳುಲಿಪಿ ಕಲಿಸುವ ಆಂದೋಲನದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಲಿಪಿ ಬರೆಯಲು ಕಲಿಸಿದ್ದು, ಕಟೀಲು ಸಮೂಹ ವಿದ್ಯಾಸಂಸ್ಥೆಗಳ ಮುನ್ನೂರು ವಿದ್ಯಾರ್ಥಿಗಳು ತುಳು ಲಿಪಿ ಬರೆಯಲು ಓದಲು ಕಲಿತು ಪರೀಕ್ಷೆಯನ್ನೂ ಬರೆದಿದ್ದಾರೆ. ತುಳುಲಿಪಿ ಕಲಿತವರಿಗೆ ಪ್ರಮಾಣಪತ್ರವನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ ಮುಂದಿನ ದಿನಗಳಲ್ಲಿ ಯುನಿಕೋಡ್‌ನಲ್ಲೂ ತುಳು ಲಿಪಿ ಬರಲಿದೆ. ವಿವಿಧ ಶಾಲೆ, ಜಾತ್ರೆ ಹೀಗೆ ಸಿಕ್ಕ ಅವಕಾಶಗಳಲ್ಲಿ ಲಿಪಿ ಕಲಿಸುವ ಪ್ರಯತ್ನ ನಡೆಸಿದ್ದೇವೆ. ಲಿಪಿ ಕಲಿಸುವ ಪ್ರಯತ್ನ ಆರಂಭವಾದ ಇತ್ತೀಚಿನ ವರುಷಗಳಲ್ಲಿ ಫಲಕಗಳಲ್ಲಿ ಆಮಂತ್ರಣಗಳಲ್ಲಿ ತುಳುವನ್ನು ಕಾಣುವಂತಾಗಿದೆ ಎಂದರು.
ಲಿಪಿ ಕಲಿಸಿದ ಕಿರಣ್, ಉದಯ ಪೂಂಜ, ಚಿರಶ್ರೀ ದೇರಳಕಟ್ಟೆ, ಪೃಥ್ವಿ, ಪ್ರತೀಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಟೀಲು ಪ್ರೌಢಶಾಲೆಯ ಎಸ್ಎಸ್‌ಎಲ್‌ಸಿಯಲ್ಲಿ ತುಳು ಪರೀಕ್ಷೆಯಲ್ಲಿ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಟೀಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕುಸುಮಾವತಿ, ರಾಜಶೇಖರ್, ಗಿರೀಶ್ ತಂತ್ರಿ, ಚಂದ್ರಶೇಖರ ಭಟ್, ಸರೋಜಿನಿ, ಹಳೆ ವಿದ್ಯಾರ್ಥಿ ಸಂಘದ ಮಿಥುನ್ ಕೊಡೆತ್ತೂರು ಇದ್ದರು. ವಿದ್ಯಾರ್ಥಿ ಅನ್ವಿತ್ ಕಲಿಕೆಯ ಅನುಭವ ಹೇಳಿದರು.ರೋಹಿಣಿ ಸ್ವಾಗತಿಸಿದರು. ಸುಷ್ಮಾ ನಿರೂಪಿಸಿದರು. ಅನಿಲ್ ವಂದಿಸಿದರು.