ಮನೆಯಿಂದಲೇ ಮತದಾನ ಮಾಡಿದ 300 ಮತದಾರರು

| Published : Apr 26 2024, 12:46 AM IST

ಮನೆಯಿಂದಲೇ ಮತದಾನ ಮಾಡಿದ 300 ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಹಾಸಿಗೆ ಹಿಡಿದ ನಮ್ಮಂತ ವಯೋವೃದ್ಧರು ಮತ ಹಾಕಲು ಹೋಗುವುದು ಅಸಾಧ್ಯ. ಮನೆಗೆ ಬಂದು ಮತ ಹಾಕಲು ಅವಕಾಶ ಮಾಡಿಕೊಟ್ಟಿದ್ದು ಸಂತಸ ತಂದಿದೆ ಎಂದು ಕಮಲಾಪೂರದ ಶತಾಯುಷಿ ಶಂಕ್ರವ್ವ ಕಲಘಟಗಿ ಖುಷಿ ವ್ಯಕ್ತಪಡಿಸಿದರು.

ಧಾರವಾಡ:

ಅರ್ಹ ಯಾರೊಬ್ಬರೂ ಮತದಾನದಿಂದ ಹೊರಗುಳಿಯದಂತೆ ಜಾಗೃತಿ ವಹಿಸಲು ಮನೆ-ಮನೆಯಿಂದಲೇ ಮತದಾನ ಪ್ರಕ್ರಿಯೆ ಜಾರಿಗೆ ಬಂದಿದೆ. ಅಂತೆಯೇ, ಧಾರವಾಡ ಲೋಕಸಭಾ ಚುನಾವಣೆಯ ಭಾಗವಾಗಿ ಗುರುವಾರ ಬೆಳಗ್ಗೆ 7ರಿಂದ ಈ ಪ್ರಕ್ರಿಯೆ ಯಶಸ್ವಿಯಾಗಿ ಶುರುವಾಗಿದೆ. ಹಿರಿಯ ನಾಗರಿಕರು ಹಾಗೂ ವಿಕಲಚೇತನರು ತಮ್ಮ ಮನೆಗಳಿಂದಲೇ ನಗು ನಗುತ್ತಲೇ ಮತ ಹಾಕಿ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದರು.

ಸಂತಸ ತಂದಿದೆ:

ಹಾಸಿಗೆ ಹಿಡಿದ ನಮ್ಮಂತ ವಯೋವೃದ್ಧರು ಮತ ಹಾಕಲು ಹೋಗುವುದು ಅಸಾಧ್ಯ. ಮನೆಗೆ ಬಂದು ಮತ ಹಾಕಲು ಅವಕಾಶ ಮಾಡಿಕೊಟ್ಟಿದ್ದು ಸಂತಸ ತಂದಿದೆ ಎಂದು ಕಮಲಾಪೂರದ ಶತಾಯುಷಿ ಶಂಕ್ರವ್ವ ಕಲಘಟಗಿ ಖುಷಿ ವ್ಯಕ್ತಪಡಿಸಿದರು. ಶಂಕ್ರವ್ವ ಅವರಿಗೆ ಕಣ್ಣು ಕಾಣಿಸುವುದಿಲ್ಲ. ಅವರ ಹಿರಿಯ ಮಗ ಪರಪ್ಪ ಕಲಘಟಗಿ ಸಹಾಯದಿಂದ ಮತ ಚಲಾಯಿಸಿದರು.

ನನಗೆ 86 ವಯಸ್ಸು. ಮೊಣಕಾಲು ನೋವು. ಅಡ್ಡಾಡಲು ಬರೋದಿಲ್ಲ. ಹೇಗೆ ಮತ ಹಾಕಬೇಕು ಎನ್ನುತ್ತಿದ್ದೇ. ಅಷ್ಟರಲ್ಲಿ ಮನೆಗೆ ಬಂದು ಮತದಾನದ ಬಗ್ಗೆ ಮಗನಿಂದ ತಿಳಿದು ನೋಂದಾಯಿಸಿದ್ದೇನು. ನಮ್ಮ ಮನೆಗೆ ಯಾವಾಗ ಡಿಸಿ ಬರಬೇಕು? ಸ್ವತಃ ಅ‍ವರೇ ಬಂದು ಮತ ಪಡೆದಿದ್ದು ಹೆಮ್ಮೆ ಎನಿಸುತ್ತಿದೆ. ಯಾರಿಗೂ ಕಾಣದಂಗ ನನ್ನ ಮತ ಪಡೆದಿದ್ದು ಮತಗಟ್ಟೆಯಲ್ಲೇ ಮತ ಹಾಕಿದಂತಾಯ್ತು ಎಂದು ಮಾಳಾಪೂರದ ಉಳವಪ್ಪ ಸತ್ಯನ್ನವರ ಕನ್ನಡಪ್ರಭಕ್ಕೆ ಹೇಳಿಕೊಂಡರು.

ಇನ್ನು ವಿಕಲಚೇತನ ಮಹಿಳೆ ರೇಖಾ ಮಡಿವಾಳ ದೊಡ್ಡನಾಯಕನಕೊಪ್ಪದ ಮುಧೋಳಕರ ಕಾಪೌಂಡ್‌ ನಿವಾಸಿ. ಪೋಲಿಯೋದಿಂದ ಒಂದು ಕಾಲು ಮತ್ತು ಒಂದು ಕೈ ಸ್ವಾದೀನ ಕಳೆದುಕೊಂಡಿದ್ದು, ಸಂವಿಧಾನದಲ್ಲಿರುವ ಸಮಾನತೆಯನ್ನು ನಮ್ಮಂತವರಿಗೂ ನೀಡಿದ್ದು ಅದರಲ್ಲೂ ಮತದಾನದ ಹಕ್ಕು ನೀಡಿ, ನನ್ನ ಮತ ಪಡೆದ ಚುನಾವಣಾ ಆಯೋಗಕ್ಕೆ ಧನ್ಯವಾದಗಳು. ಮಹಿಳಾ ಜಿಲ್ಲಾಧಿಕಾರಿಯ ಕಾಳಜಿ, ಕಳಕಳಿ ನೋಡಿ ಹೆಮ್ಮೆ ಮೂಡಿಸಿದೆ ಎಂದು ಮತದಾನ ಪ್ರಕ್ರಿಯೆ ವೀಕ್ಷಿಸಲು ಆಗಮಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಎದುರು ಹೇಳಿಕೊಂಡರು.

ಯಾರ್‍ಯಾರಿಗೆ ಅವಕಾಶ:

ಮನೆಯಿಂದ ಮತದಾನಕ್ಕೆ ನೋಂದಾಯಿಸಿದ ಮತದಾರರಿಂದ ಮತದಾನ ಪಡೆಯಲು ಸೆಕ್ಟರ್ ಆಫೀಸರ್ ನೇತೃತ್ವದಲ್ಲಿ 102 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಪಿಆರ್‌ಒ, ಪೊಲೀಸ್ ಸೇರಿ ಐವರು ಸಿಬ್ಬಂದಿಗಳಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನೋಂದಾಯಿತ 85 ವರ್ಷ ಮೇಲ್ಪಟ್ಟ ಹಾಗೂ ಶೇ. 40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಕಲಚೇತನರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸುತ್ತಿದ್ದಾರೆ. ಗುರುವಾರ ಮಧ್ಯಾಹ್ನದ ವರೆಗೆ ಜಿಲ್ಲೆಯಲ್ಲಿ 300 ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಅಗತ್ಯ ಸೇವೆಯಡಿ ಬರುವ 16 ಇಲಾಖೆಗಳ ನೌಕರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶವಿದೆ. ಅಂಚೆ ಮತದಾನ ಮಾಡಲು 1191 ಮತದಾರರು 12ಡಿ ಪಡೆದಿದ್ದು ಅದರಲ್ಲಿ 1167 ಜನರು ನಮೂನೆ 12ಡಿ ಸಲ್ಲಿಸಿದ್ದು, ಅನುಮೋದಿಸಲಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿನ ಅಂಚೆ ಮತದಾನಕ್ಕೆ ಧಾರವಾಡ ತಹಸೀಲ್ದಾರ್‌ ಕಚೇರಿಯಲ್ಲಿ ಮೇ 1ರಿಂದ ಮೇ 3ರ ವರೆಗೆ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ವಿನಿಮಯ ಕೇಂದ್ರ ಸ್ಥಾಪನೆ:

ನೌಕರ ಕರ್ತವ್ಯ ಸಲ್ಲಿಸುವ ಜಿಲ್ಲೆ ಮತ್ತು ಮತದಾರನಾಗಿರುವ ಜಿಲ್ಲೆ ಬೇರೆ ಬೇರೆ ಆಗಿದ್ದಲ್ಲಿ ಅವರು ಮತದಾನ ಮಾಡಲು ಅನುಕೂಲವಾಗುವಂತೆ ಅಂಚೆ ಮತಪತ್ರ ವಿತರಿಸಿ, ಸಂಗ್ರಹಿಸಿ, ಅವರು ಮತದಾರರಾಗಿರುವ ಜಿಲ್ಲೆಗಳಿಗೆ ಕಳುಹಿಸಲು ಮತ್ತು ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡ ಜಿಲ್ಲೆಯ ನೌಕರರ ಅಂಚೆ ಮತಪತ್ರ ಪಡೆಯಲು ಆಯೋಗವು ಪ್ರಥಮ ಬಾರಿಗೆ ಎಕ್ಸ್‌ಚೈಂಜ್ ಸೆಂಟರ್ ತೆರೆದಿದೆ. ಉತ್ತರ ಕರ್ನಾಟಕ ಪೈಕಿ ಧಾರವಾಡ ನಗರದ ಆರ್.ಎಲ್.ಎಸ್. ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.

ಈ ವೇಳೆ ಅಂಚೆ ಮತಪತ್ರದ ಜಿಲ್ಲಾ ನೋಡಲ್ ಅಧಿಕಾರಿ ಮೋಹನ ಶಿವಣ್ಣವರ, ಸಹಾಯಕ ಚುನಾವಣಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಸಹಾಯಕ ನೋಡಲ್ ಅಧಿಕಾರಿ ನಿಂಗನಗೌಡ ಶಾನಬೋಗ, ರಾಜಶೇಖರ ಹಳ್ಳೂರ ಇದ್ದರು.ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಾಗಿದ್ದು, ಮಾ. 16ರಿಂದ ಈ ವರೆಗೆ 915 ಪ್ರಕರಣ ದಾಖಲಿಸಿಕೊಂಡು ಒಟ್ಟು ₹ 21.47 ಲಕ್ಷ ಮೌಲ್ಯದ ವಸ್ತು, ನಗದು ಜಪ್ತಿ ಮಾಡಲಾಗಿದೆ. ಜಪ್ತಿಗೆ ಸರಿಯಾದ ದಾಖಲೆ ಸಲ್ಲಿಸಿದ ಪ್ರಕರಣಗಳಲ್ಲಿ ಅವುಗಳ ಮಾಲೀಕರಿಗೆ ಈ ವರೆಗೆ ₹ 19.16 ಲಕ್ಷ ನಗದು ಮರಳಿ ಬಿಡುಗಡೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಎಫ್.ಎಸ್.ಟಿ ಮತ್ತು ಎಸ್.ಎಸ್.ಟಿ ತಂಡಗಳಿಂದ 12 ಪ್ರಕರಣಗಳಲ್ಲಿ, 76 ಪ್ರಕರಣಗಳಲ್ಲಿ ಪೊಲೀಸ್, 826 ಪ್ರಕರಣಗಳಲ್ಲಿ ಅಬಕಾರಿ ಇಲಾಖೆ ಎಫ್‌ಐಆರ್‌ ದಾಖಲಿಸಿದೆ ಎಂದು ಚುನಾವಾಣಾಧಿಕಾರಿ ದಿವ್ಯ ಪ್ರಭು ಹೇಳಿದರು.