ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ 2023ರ ಜೂನ್ 11 ರಿಂದ 2025ರ ಜೂ.30 ರವರೆಗೆ 31.04 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ ಹಿನ್ನೆಲೆಯಲ್ಲಿ ಮೈಸೂರಿನ ಕೆಎಸ್ಆರ್ ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದ ಸಂಭ್ರಮಾಚರಣೆಯಲ್ಲಿ ಪ್ರಯಾಣಿಕರಿಗೆ ಟಿಕೆಟ್ ಹಾಗೂ ಸಿಹಿ ವಿತರಿಸಿದ ಬಳಿಕ ಅವರು ಮಾತನಾಡಿದರು.
ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಕರ್ನಾಟಕದಲ್ಲಿ 500 ಕೋಟಿ ಮಹಿಳೆಯರು ಉಚಿತ ಸಂಚಾರ ಮಾಡಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸಾರಿಗೆ ನಿಗಮದ ಅಭಿವೃದ್ಧಿಗೂ ಶಕ್ತಿ ಯೋಜನೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.ಸಂಭ್ರಮಾಚರಣೆಯ ಭಾಗವಾಗಿ ಅಲಂಕೃತ ಬಸ್ಸಿನಲ್ಲಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಅಶೋಕ ರಸ್ತೆ ಮಾರ್ಗವಾಗಿ ನಗರ ಬಸ್ ನಿಲ್ದಾಣದ ತನಕ ಪಯಣಿಸಿದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಮಾಜಿ ಮೇಯರ್ ಗಳಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಚ್.ಟಿ. ವೀರೇಶ್, ಶ್ರೀನಿವಾಸ್ ಮೊದಲಾದವರು ಇದ್ದರು.ಶಕ್ತಿ ಯೋಜನೆಯಿಂದ ಮಹಿಳೆಯರ ಸಬಲೀಕರಣವಾಗುತ್ತಿದೆ
ಕನ್ನಡಪ್ರಭ ವಾರ್ತೆ ನಂಜನಗೂಡುಶಕ್ತಿ ಯೋಜನೆಯಿಂದ ಮಹಿಳೆಯರ ಸಬಲೀಕರಣವಾಗುತ್ತಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಾಬಾ ಸಾಹೇಬರ ಸಂವಿಧಾನದ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ, ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಬಡ ಕುಟುಂಬಗಳು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ, ಮಹಿಳೆಯರ ಬಲವರ್ಧನೆಗಾಗಿ ರೂಪಿಸಿದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ರಾಜ್ಯಾದ್ಯಂತ 500 ಕೋಟಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿರುವ ಮೂಲಕ ಮೈಲುಗಲ್ಲು ಸ್ಥಾಪಿಸಿದ್ದಾರೆ. ಆ ಮೂಲಕ ರಾಜ್ಯ ಇಡೀ ದೇಶದಲ್ಲಿ ಮಹಿಳಾ ಸಬಲೀಕರಣದತ್ತ ದಾಪು ಕಾಲು ಹಾಕುತ್ತಿರುವುದು ಸಂತಸ ತಂದಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ಸರ್ ಅಹಮದ್, ಗ್ರಾಪಂ ಉಪಾಧ್ಯಕ್ಷ ಲೋಕೇಶ್, ಮುಖಂಡರಾದ ಎಂ. ಮಾದಪ್ಪ, ಅಭಿನಂದನ್ ಪಟೇಲ್, ರಾಜು, ಶಿವನಂಜನಾಯಕ, ಸೋಮೇಶ್, ಸಂಗರಾಜು, ಗೋವಿಂದರಾಜು, ಶಿವಣ್ಣ, ಮಹೇಶ್, ಹುಲಿಚಾಮುಂಡನಾಯಕ, ಎನ್. ಬಸವರಾಜು, ಮೂರ್ತಿ, ಸೋಮಸುಂದರ್, ಎಚ್.ಎನ್. ಮಲ್ಲೇಶ್, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರಾದ ಬಿ.ಕೆ. ಶಂಕರ್, ಎಚ್.ಎಂ. ಬಸವರಾಜು, ರಾಜೇಶ್ ಇದ್ದರು.