ಸಾರಾಂಶ
ಶಿವಮೊಗ್ಗ: ನಗರದ ಪ್ರಭು ಮೈದಾನ (ಫ್ರೀಡಂ ಪಾಕ್೯)ದಲ್ಲಿ ಜ.31ರಿಂದ ಫೆ.2ರವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಅಭಾವಿಪ) ಕರ್ನಾಟಕ ದಕ್ಷಿಣ ವಿಭಾಗದ 44ನೇ ಪ್ರಾಂತ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಎಸ್.ನಾಗರಾಜ್ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 75 ವರ್ಷಗಳಿಂದ ಅಭಾವಿಪ ರಾಷ್ಟ್ರದ ಪುನರ್ ನಿರ್ಮಾಣ, ಏಕತೆ ಮತ್ತು ಸಮಗ್ರತೆಗೆ ಶ್ರಮಿಸುತ್ತಿರುವ ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಮುಖ ವಿದ್ಯಾರ್ಥಿ ಸಂಗಟನೆಯಾಗಿದೆ ಎಂದರು.ರಾಷ್ಟ್ರೀಯ ಜ್ಞಾನ, ಆಧ್ಯಾತ್ಮಿಕ ಚಾರಿತ್ರ್ಯ, ಏಕತೆಯ ಆಧಾರದ ಮೇಲೆ ವ್ಯಕ್ತಿ ನಿರ್ಮಾಣ ಮಾಡುತ್ತ ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆ ಎಂಬ ತತ್ವದಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನೆಯ ಪ್ರಯತ್ನ, ಪಕ್ಷ ರಾಜಕಾರಣದಿಂದ ಮೇಲೆ ರಾಷ್ಟ್ರ ರಾಜಕಾರಣದಲ್ಲಿ ಪಾಲ್ಗೊಳ್ಳುವ ರಾಷ್ಟ್ರ ಹಿತದ ರಾಜನೀತಿ, ರಚನಾತ್ಮಕ ಆಂದೋಲನ ಮೊದಲಾದವುಗಳ ಮೂಲಕ ವಿದ್ಯಾರ್ಥಿಯು ಯುವಶಕ್ತಿ ಆಗಬೇಕೆಂಬ ಹಿನ್ನೆಲೆಯಲ್ಲಿ ಈ ಸಮ್ಮೇಳನ ಅಯೋಜನೆ ಆಗಿದೆ ಎಂದು ಹೇಳಿದರು.ಸಮ್ಮೇಳನದಲ್ಲಿ ಧ್ವಜಾರೋಹಣ, ಶೈಕ್ಷಣಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ನಿರ್ಣಯಗಳು, ಸಮಾನಾಂತರ ಗೋಷ್ಠಿಗಳು, ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ, ಸಾರ್ವಜನಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಯುವ ಸಾಧಕರೊಂದಿಗೆ ಸಂವಾದ, ಯುವ ಪುರಸ್ಕಾರ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.ಈ ಸಮ್ಮೇಳನಕ್ಕೆ ದಕ್ಷಿಣ ಪ್ರಾಂತದ ಶಿವಮೊಗ್ಗ ಸೇರಿದಂತೆ ಉತ್ತರ ಕನ್ನಡ, ಉಡುಪಿ, ಮಂಗಳೂರು, ಕೊಡಗು, ದಾವಣಗೆರೆ, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ 1200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಆಗಮಿಸಲಿದ್ದಾರೆ. ಪ್ರತಿನಿಧಿಗಳ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿಧಿಗಳ ಸಾರಿಗೆ-ಸಂಚಾರಗಳ ಅನುಕೂಲಕ್ಕಾಗಿ ಸ್ಥಳೀಯ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದು ತಿಳಿಸಿದರು.
ಸಮ್ಮೇಳನದ ಯಶಸ್ಸಿಗೆ ನಗರದ ಹಲವಾರು ಗಣ್ಯರು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡುತ್ತಿವೆ.ಶಿವಮೊಗ್ಗ ನಗರದಲ್ಲಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಸಮ್ಮೇಳನದ ಪ್ರಯೋಜನ ಪಡೆಯಬೇಕು ಎಂದು ವಿನಂತಿಸಿದರು.ಸಮ್ಮೇಳನದ ಯಶಸ್ಸಿಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯೊಂದನ್ನು ರಚಿಸಲಾಗಿದ್ದು, ಪರ್ಫೆಕ್ಟ್ ಅಲಾಯ್ಸ್ ನ ವಸಂತ ಕೃಷ್ಣ ದಿವೇಕರ್, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ನಾಗೇಂದ್ರ, ಅಮೃತ ನೋನಿ ಕಂಪನಿಯ ಡಾ.ಶ್ರೀನಿವಾಸಮೂರ್ತಿ, ಕೈಗಾರಿಕೋದ್ಯಮಿ ರಮೇಶ ಹೆಗ್ಡೆ ಅವರುಗಳು ಉಪಾಧ್ಯಕ್ಷರಾಗಿ ಅಶೋಕ ಸಂಜೀವಿನ ಆಸ್ಪತ್ರೆಯ ಡಾ.ಕೆ.ಜೆ.ಹೇಮಂತ್, ಅಕ್ಷರ ಸಮೂಹ ಸಂಸ್ಥೆಯ ರತ್ನಾಕುಮಾರಿ.ಕೆ, ಲೆಕ್ಕ ಪರಿಶೋಧಕ ಪಣೀಶ್.ಕೆ.ಕೆ ಪ್ರಧಾನ ಕಾರ್ಯದರ್ಶಿಗಳಾಗಿ, ಹರ್ಷ ದಿ ಫನ್೯ ಇನ್ ಹೋಟೆಲ್ಲಿನ ಹರ್ಷ ಕಾರ್ಯದರ್ಶಿಯಾಗಿ, ಜಾನ್‌ಡೀರ್ ಟ್ರಾಕ್ಟರ್ಸ್ನ ಲೋಕೇಶ್ವರ್ ಕಾಳೆ ಕೋಶಾಧ್ಯಕ್ಷರಾಗಿ, ಹಿರಿಯ ನ್ಯಾಯವಾದಿ ರಾಜೇಶ್ ಶಾಸ್ತ್ರಿ ಸಂಚಾಲಕರಾಗಿ, ಶಿವಕುಮಾರ್.ಡಿ.ಎಸ್ ಸಹ ಸಂಚಾಲಕರಾಗಿ ಕಾರ್ಯ ನಿರ್ವಹಿಸುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಜೆ.ಹೇಮಂತ್, ಸಂಚಾಲಕ ರಾಜೇಶ್ ಶಾಸ್ತ್ರಿ, ಹಿರಿಯ ವಕೀಲರಾದ ಅಶೋಕ ಜಿ.ಭಟ್ಟ, ಅನಂತದತ್ತ, ಲಕ್ಷ್ಮೀ ಗೋಪಿನಾಥ್, ಪವಿತ್ರ ಮುರಳಿ, ಡಾ.ರಂಜನಿ ಬಿದರಹಳ್ಳಿ, ರಮೇಶ್ ಹೆಗ್ಡೆ, ಪ್ರವೀಣ ಎಚ್.ಕೆ. ಶಿವಕುಮಾರ್ ಡಿ.ಎಸ್.ಲೋಕೇಶ್ವರ್ ಕಾಳೆ, ವಸಂತ್ ದಿವೇಕರ್ ಮೊದಲಾದವರಿದ್ದರು.