ಸಾರಾಂಶ
ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹32.95 ಲಕ್ಷವನ್ನು ಪೊಲೀಸರು ಕಡೆಬಾಗಿಲು ಚೆಕ್‌ಪೋಸ್ಟ್ ಬಳಿ ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹32.95 ಲಕ್ಷವನ್ನು ಪೊಲೀಸರು ಕಡೆಬಾಗಿಲು ಚೆಕ್‌ಪೋಸ್ಟ್ ಬಳಿ ಜಪ್ತಿ ಮಾಡಿದ್ದಾರೆ.ಚೆಕ್‌ಪೋಸ್ಟ್‌ನಲ್ಲಿ ಪಿಎಸ್‌ಐ ಉಮರ್ ಬಾನು, ಸಿಬ್ಬಂದಿ ಸಂಗಪ್ಪ, ಮಂಜು, ಕನಕಪ್ಪ, ಮಲ್ಲಯ್ಯ ವಾಹನ ತಪಾಸಣೆ ಮಾಡುತ್ತಿದ್ದರು. ಬುಕ್ಕಸಾಗರದಿಂದ ಗಂಗಾವತಿಗೆ ಹೋಗುತ್ತಿದ್ದ ಕಾರು (34 ಪಿ 8486) ಅನ್ನು ಪೊಲೀಸ್ ಸಿಬ್ಬಂದಿ ಪರಿಶೀಲಿಸಿದ್ದು, ಈ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಕಾರಿನೊಂದಿಗೆ ₹32.95 ಲಕ್ಷವನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಿಧವೆಯ ಗರ್ಭಪಾತ ಪ್ರಕರಣ; ವೈದ್ಯ ಸೇರಿ ಮೂವರ ಮೇಲೆ ಪ್ರಕರಣ: ಕನಕಗಿರಿ ತಾಲೂಕಿನ ವರನಕೇಡ ಗ್ರಾಮದ ವಿಧವೆಯ ಗರ್ಭಪಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವೈದ್ಯ ಸೇರಿ ಮೂವರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.
ಫೆ. ೧೪ರಂದು ಸಂತ್ರಸ್ತೆ ಕಾಣೆಯಾಗಿರುವ ಕುರಿತು ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮಾ. ೧೯ರಂದು ಮತ್ತೊಂದು ಪ್ರಕರಣ ದಾಖಲಾಗಿದೆ.ನಂಬಿಸಿ ಮೋಸ ಮಾಡಿದ್ದಲ್ಲದೇ ಬಲವಂತವಾಗಿ ಅತ್ಯಾಚಾರವೆಸಗಿ ಕೊನೆಗೆ ಗರ್ಭಪಾತ ಮಾಡಿಸಿರುವ ಕುರಿತು ಸಂತ್ರಸ್ತೆ ದೂರು ನೀಡಿದ್ದಾರೆ. ಪೊಲೀಸರು ವೈದ್ಯ ಡಾ. ಕಟ್ಟಿಮನಿ, ಮಂಜುನಾಥ ನಾಯಕ, ಹನುಮೇಶ ಎಂಬವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ವಿಧವೆಯನ್ನು ಪ್ರೀತಿಸಿದ ಮಂಜುನಾಥ ನಾಯಕ ೨೦೨೪ರ ಫೆ. ೧೧ರಂದು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ತಾವರಗೇರಾಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಹೊಸಪೇಟೆ, ಹಂಪಿ, ತುಮಕೂರು ಸೇರಿ ವಿವಿಧೆಡೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರವೆಸಗಿ ಗರ್ಭಿಣಿಯಾಗುವಂತೆ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.ಬಳಿಕ ನಮ್ಮೂರಿಗೆ ಹೋಗೋಣ ಬಾ ಎಂದು ನಂಬಿಸಿ ಹಿರೇವಂಕಲಕುಂಟಾಕ್ಕೆ ಕರೆದುಕೊಂಡು ಬಂದು ವೈದ್ಯ ಎಂ.ಎಂ. ಕಟ್ಟಿಮನಿಗೆ ಸೇರಿದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಗರ್ಭಪಾತ ಮಾಡಿಸಲಾಗಿದೆ. ಮೂರು ದಿನದ ಬಳಿಕ ಮಂಜುನಾಥ ನಾಯಕ, ಹನುಮೇಶ ಮಾ.16ರ ರಾತ್ರಿ ೧೧ ಗಂಟೆಗೆ ಕನಕಗಿರಿ ಸಮೀಪದ ಚಿಕ್ಕಮಾದಿನಾಳ ಕ್ರಾಸ್ ಬಳಿ ಕೂರಿಸಿ ಈಗ ಬರುತ್ತೇವೆ, ಇಲ್ಲಿಯೇ ಇರು ಎಂದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಆರೋಪಿಗಳು ತೆರಳಿದ ಐದೇ ನಿಮಿಷಕ್ಕೆ ಅಲ್ಲಿಗೆ ಆಗಮಿಸಿದ ಪೊಲೀಸ್ ಕಾನ್‌ಸ್ಟೇಬಲ್ ಗವಿಸಿದ್ದಯ್ಯ ಹಿರೇಮಠ, ಮಹಿಳೆಯನ್ನು ಬೈಕ್ ಮೂಲಕ ಕನಕಗಿರಿಗೆ ಕರೆದುಕೊಂಡು ಬಂದಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ದಾಖಲಿಸುವ ಬದಲು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಟ್ಟು ತೆರಳಿದ್ದಾರೆ. ಇದರಿಂದ ಮಹಿಳೆ ತೀವ್ರ ಅಸ್ವಸ್ಥಳಾಗಿದ್ದಾಳೆ. ಮಹಿಳಾ ಪೇದೆ ಇಲ್ಲದೇ ರಾತ್ರಿ ಬೈಕ್‌ನಲ್ಲಿ ಕರೆದುಕೊಂಡು ಬಂದ ಹಿನ್ನೆಲೆಯಲ್ಲಿ ಗವಿಸಿದ್ದಯ್ಯ ಮೇಲೆಯೂ ಮಹಿಳೆ ದೂರು ನೀಡಿದ್ದಾಳೆ.ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ನ್ಯಾಯ ಕೊಡಿಸಿ:ವಿಧವೆಯಾದ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ತಿಂಗಳಿಗೂ ಹೆಚ್ಚು ಕಾಲ ಅತ್ಯಾಚಾರ ಮಾಡಿದ್ದಲ್ಲದೇ ನನ್ನ ಸಹಮತಿ ಇಲ್ಲದೆ ಗರ್ಭಪಾತ ಮಾಡಿಸಿ, ರಾತ್ರಿ ವೇಳೆ ಅಪರಿಚಿತ ಸ್ಥಳದಲ್ಲಿ ಬಿಟ್ಟು ಹೋಗಿರುವ ಮಂಜುನಾಥ, ಹನುಮೇಶ, ಗರ್ಭಪಾತ ಮಾಡಿದ ಹಿರೇವಂಕಲಕುಂಟಾದ ಎಂ.ಎಂ. ಕಟ್ಟಿಮನಿ ಮತ್ತು ನನಗೆ ತೀವ್ರ ರಕ್ತಸ್ರಾವ ಉಂಟಾದಾಗ ಆಸ್ಪತ್ರೆಗೆ ದಾಖಲಿಸಿ ಮನವೀಯತೆ ಮೆರೆಯಬೇಕಿದ್ದ ಪೇದೆ ಗವಿಸಿದ್ದಯ್ಯ ಹಿರೇಮಠ ಅಮಾನವೀಯವಾಗಿ ನಡೆದುಕೊಳ್ಳುವ ಮೂಲಕ ಮಾನಸಿಕ, ದೈಹಿಕ ನೋವುಂಟಾಗಲು ಕಾರಣರಾಗಿದ್ದು, ಇವರೆಲ್ಲರ ಮೇಲೆ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.