ಹರಿಹರ ತಾಲೂಕಲ್ಲಿ ೩೨ ಶಾಲೆಗಳು ದ್ವಿಭಾಷಾ ಕಲಿಕೆಗೆ ಆಯ್ಕೆಯಾಗಿದ್ದು, ಕನ್ನಡ ಮತ್ತು ಆಂಗ್ಲ ಭಾಷೆಯ ಮೂಲಕ ಸಾವಿರಾರು ಮಕ್ಕಳನ್ನು ಕಲಿಕೆಗೆ ಒಳಪಡಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಮಲೇಬೆನ್ನೂರಿನಲ್ಲಿ ತಿಳಿಸಿದ್ದಾರೆ.
- ಸಂಕ್ಲೀಪುರ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ತಾಲೂಕಲ್ಲಿ ೩೨ ಶಾಲೆಗಳು ದ್ವಿಭಾಷಾ ಕಲಿಕೆಗೆ ಆಯ್ಕೆಯಾಗಿದ್ದು, ಕನ್ನಡ ಮತ್ತು ಆಂಗ್ಲ ಭಾಷೆಯ ಮೂಲಕ ಸಾವಿರಾರು ಮಕ್ಕಳನ್ನು ಕಲಿಕೆಗೆ ಒಳಪಡಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ತಿಳಿಸಿದರು.ಇಲ್ಲಿಗೆ ಸಮೀಪದ ಸಂಕ್ಲೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾದಂತೆ ಕೊಠಡಿಗಳನ್ನು ಮಂಜೂರು ಮಾಡಲು ಮೇಲಾಧಿಕಾರಿಗೆ ವರದಿ ಮಾಡುವುದು ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಖಾಸಗಿ ಶಾಲೆಗಿಂತ ಹೆಚ್ಚಾಗಿ ಪ್ರತಿಭೆಯುಳ್ಳ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಸೇವೆ ಮಾಡುತ್ತಿದ್ದು ಅನುಮಾನ ಸಮಸ್ಯೆ ಇದ್ದಲ್ಲಿ ಮಕ್ಕಳು ಹಾಗೂ ಪೋಷಕರು ಮುಖ್ಯ ಶಿಕ್ಷಕರ ಗಮನಕ್ಕೆ ತರಬೇಕು. ಅಥವಾ ನಮಗೆ ಫೋನ್ ಮಾಡಬಹುದು. ಸರ್ಕಾರ ಮಕ್ಕಳಿಗಾಗಿ ಬಿಸಿಯೂಟ, ಮೊಟ್ಟೆ, ಮಾತ್ರೆ, ಸಮವಸ್ತ್ರ, ಶೂ, ಹಾಲು ವಿದ್ಯಾರ್ಥಿ ವೇತನ ಸೌಲಭ್ಯಗಳನ್ನು ನೀಡುತ್ತಿದೆ. ಜತೆಗೆ ಸರ್ಕಾರೇತರ ಸಂಸ್ಥೆಗಳೂ ಶಾಲೆಗಳಿಗೆ ನೆರವು, ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಿ ಮಕ್ಕಳ ಹಾಜರಾತಿ ಹೆಚ್ಚಾಗಲು ನೇರ ಕಾರಣವಾಗಿದ್ದಾರೆ. ಅವರಿಗೆ ಶಿಕ್ಷಣ ಇಲಾಖೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.ಪತ್ರಕರ್ತ ಎಚ್.ಎಂ. ಸದಾನಂದ ಮಾತನಾಡಿ, ಕೆಲ ವಿದ್ಯಾರ್ಥಿಗಳು ಚಿಕ್ಕ ವಯಸ್ಸಲ್ಲಿಯೇ ಮದ್ಯಪಾನ, ಧೂಮಪಾನ, ತಂಬಾಕು ಅನೇಕ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದು ದುರಂತದ ಸಂಗತಿಯಾಗಿದೆ. ಪೋಷಕರು ಅವರ ವರ್ತನೆಯನ್ನು ಗಮನಿಸಿ, ಸರಿಪಡಿಸಬೇಕು ಎಂದು ತಿಳಿಸಿದರು.
ಇಂಗ್ಲಿಷ್ ಶಿಕ್ಷಕ ಹರೀಶ್ ಬಡಿಗೇರ ಅವರ ಈಜಿ ಇಂಗ್ಲಿಷ್ ಕಲಿಕಾ ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಗ್ರಾಮದ ಮುಖಂಡರಾದ ಹಾಲಪ್ಪ, ನಿಂಗಪ್ಪ, ಸೋಮಶೇಖರ್, ಹಾಲನಗೌಡ, ಚನ್ನಬಸಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಕರಿಬಸಪ್ಪ, ಉಪಾಧ್ಯಕ್ಷೆ ನಾಗಮ್ಮ, ಸಂಪನ್ಮೂಲ ವ್ಯಕ್ತಿ ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕ ವಾಗೀಶಯ್ಯ, ಅಂಗನವಾಡಿ ಕಾರ್ಯಕರ್ತೆ ರುದ್ರಮ್ಮ, ಶಿಕ್ಷಕ ಶಶಿಕುಮಾರ್, ಹರೀಶ್,ಯುವಕ ಚೇತನ್, ಚಂದ್ರು, ಮೈಲಾರಪ್ಪ, ಉಪಾಧ್ಯಾಯಿನಿ ಸಾವಿತ್ರ ಮತ್ತಿತರರು ಇದ್ದರು. ಗ್ರಾಮಸ್ಥರು, ಅಧಿಕಾರಿಗಳು ಎಲ್‌ಕೆಜಿ ಮಕ್ಕಳಿಗೆ ನೋಟ್‌ಬುಕ್, ಸಮವಸ್ತ್ರಗಳನ್ನು ವಿತರಿಸಿದರು.- - -
(ಕೋಟ್) ಸಂಕ್ಲೀಪುರ ಗ್ರಾಮದ ಯುವಕರು ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸುವ ಗುಣ ಹೊಂದಿದ್ದಾರೆ. ಈ ಕಾಳಜಿ ಇರೋದಕ್ಕೆ ₹7 ಕೋಟಿ ವೆಚ್ಚದಲ್ಲಿ ಹರಿಹರ ತಾಲೂಕು- ಹೊನ್ನಾಳಿ ತಾಲೂಕು ಸಂಪರ್ಕ ಕಲ್ಪಿಸುವ ಒಂದು ಸೇತುವೆ ನಿರ್ಮಾಣವಾಗಿದೆ. ಈ ಶಾಲೆಗೆ ಅಗತ್ಯ ಮತ್ತು ಆದ್ಯತೆಗೆ ತಕ್ಕಂತೆ ಸ್ನೇಹಿತರೊಂದಿಗೆ ಚರ್ಚಿಸಿ ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್‌ಗಳು ಮತ್ತು ಶುದ್ಧನೀರು ವ್ಯವಸ್ಥೆ ಮಾಡಲಾಗುವುದು.- ಅಣ್ಣಪ್ಪ ಓಬಳಾಪುರ, ಗ್ರಾಮಾಡಳಿತ ಅಧಿಕಾರಿ.
- - --ಚಿತ್ರ-೧: ಎಲ್‌ಕೆಜಿ, ಯುಕೆಜಿ ತರಗತಿಗಳ ಉದ್ಘಾಟನೆ ನಡೆಯಿತು.