ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಳೆದ ವರ್ಷ ನಬಾರ್ಡ್ (ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್) ನಿಂದ ₹5,600 ಕೋಟಿ ಸಾಲ ನೀಡಿದ್ದರು. ಆದರೆ, ಈ ಬಾರಿ ₹2340 ಕೋಟಿ ಸಾಲ ಮಾತ್ರ ನೀಡಿದ್ದಾರೆ. ಅಂದರೆ, ₹3260 ಕೋಟಿ ಸಾಲ ಕಡಿಮೆ ಆಯ್ತು. ಇದು ನಮ್ಮ ರಾಜ್ಯದ ರೈತರಿಗೆ ಮಾಡುವ ದ್ರೋಹ ಅಲ್ವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಭಾನುವಾರ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಬಾರಿ ನಬಾರ್ಡ್‌ನಿಂದ ಶೇಕಡ 58ರಷ್ಟು ಹಣ ಕಡಿಮೆ ಮಾಡಿದ್ದಾರೆ. ಆದರೆ, ರೈತರ ಪರ ಭಾಷಣ ಮಾಡ್ತಾರೆ. ಇದೇ ಕಾರಣಕ್ಕೆ ಎರಡು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ರೈತರಿಗೆ ಅನ್ಯಾಯ ಮಾಡಬೇಡಿ ಎಂದು ತಿಳಿಸಿದ್ದೇನೆ ಎಂದರು.
ಎಲ್ಲ ಪಾಟೀಲರು ಇದ್ದೀರಿ ಇಲ್ಲಿ, ನೀವೆಲ್ಲ ಸೇರಿ ಕೇಂದ್ರದವರಿಗೆ, ನಬಾರ್ಡ್‌ನವರಿಗೆ ಸಹಕಾರಿ ಕ್ಷೇತ್ರಕ್ಕೆ ದುಡ್ಡು ಕೊಡಿ ಎಂದು ಪತ್ರ ಬರೆಯಿರಿ ಎಂದು ಸಭೆಯಲ್ಲಿ ಇದ್ದ ಪಾಟೀಲ್ ಹೆಸರಿನ ಶಾಸಕರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.2021ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದಾಗ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಸಹಕಾರಿ ಇಲಾಖೆ ಇರಲಿಲ್ಲ. ಸಹಕಾರಿ ಇಲಾಖೆ ರಾಜ್ಯದ ವ್ಯಾಪ್ತಿಗೆ ಇತ್ತು. ಕೇಂದ್ರದಲ್ಲಿ ಸಹಕಾರ ಇಲಾಖೆ ಸೃಷ್ಟಿಸಿದರು. ಅಮಿತ್ ಶಾ ಮೊದಲ ಬಾರಿಗೆ ಸಹಕಾರಿ ಮಂತ್ರಿ ಆದರು, ಎರಡನೇ ಬಾರಿಗೂ ಮಂತ್ರಿ ಆದರು, ಇದರಿಂದ ರೈತರಿಗೆ ಏನಾದರೂ ಲಾಭ ಆಗಿದೆಯಾ? ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡಿದ್ದ ₹1 ಲಕ್ಷ ಕೋಟಿ ಸಾಲಮನ್ನಾ ಹಣ ಅವರು ಕೊಡಲಿಲ್ಲ. ನಾನು ಬಂದು ಕೊಡಬೇಕಾಯಿತು. ಹೆಸರು ಅವರಿಗೆ, ಸಾಲ ತೀರಿಸೋದು ನಾವು. ರೈತರ ಸಾಲ ಮನ್ನಾ ಎಂದು ಅವರು ಹೇಳಿಕೊಳ್ಳೋದು ಎಂದು ಪರೋಕ್ಷವಾಗಿ ಎಚ್‌ಡಿಕೆ ಸಿಎಂ ಇದ್ದಾಗ ರೈತರ ಸಾಲ ಮನ್ನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಬಿಜೆಪಿ 40% ಕಮಿಷನ್ ಪಡೆದಿಲ್ಲ ಎನ್ನಲಾಗದು:ಬಿಜೆಪಿ ಅವಧಿಯಲ್ಲಿ 40% ಕಮಿಷನ್ ನಡೆದೇ ಇಲ್ಲ ಎನ್ನಲಾಗದು. ಕೆಲವು ಸಲ ಸಾಕ್ಷ್ಯಾಧಾರಗಳ ಕೊರತೆಯಿಂದ ಸತ್ಯಾಂಶ ಹೊರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 40% ಕಮಿಷನ್ ಆರೋಪದಿಂದ ಮುಕ್ತರಾಗಿದ್ದೇವೆ ಎನ್ನುವ ಆರ್.ಅಶೋಕ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಆಯೋಗ ವರದಿ ಕೊಟ್ಟಿದೆ. ಅದರಲ್ಲಿ ಏನಿದೆ ಎಂಬುದನ್ನು ನಾನು ನೋಡಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳು ಬಿಡುಗಡೆ ಆಗುತ್ತಾರೆ. ಹಾಗಂತ ಕೊಲೆಯೇ ಆಗಿಲ್ಲ ಅಂದರೆ ಹೇಗೆ?. ಕೊಲೆ ನಡೆದಿರುತ್ತದೆ. ಸಾಕ್ಷಿಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೇ. 40 ಪರ್ಸೆಂಟ್ ಕಮಿಷನ್ ವಿಚಾರದಲ್ಲೂ ಹೀಗೆಯೇ ಆಗಿದೆ. ಹಾಗಂತ ಅದು ನಡದೇ ಇಲ್ಲ ಎನ್ನಲು ಆಗುವುದಿಲ್ಲ. ಬಿಜೆಪಿಗರ ಮಾತು ಕೇಳಿ ಹೇಳಬೇಡಿ, ಅಧಿಕೃತ ಇದ್ದರೆ ಮಾತ್ರ ಹೇಳಿ ಎಂದು ಮಾಧ್ಯಮದವರಿಗೆ ಹೇಳಿದರು.ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಆಫರ್ ನೀಡಲಾಗಿತ್ತೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದರು, ವಿಫಲರಾದರು. ಬಳಿಕ ನನ್ನ ಮೇಲೆ ಸುಳ್ಳು ಕೇಸ್ ಹಾಕಲು ಶುರು ಮಾಡಿದರು ಎಂದರು.