ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
13 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಕೃಷಿ, ಅಂಗನವಾಡಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಬೇನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ನಾಲ್ಕೂವರೆ ಎಕರೆ ವಿಶಾಲವಾದ ಪ್ರದೇಶ ಹೊಂದಿದೆ. ಹುನ್ನರಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಹೀಗಾಗಿ ಕೇಂದ್ರವನ್ನು ವಿಸ್ತರಿಸುವ ಮೂಲಕ ಆಸ್ಪತ್ರೆಯ ಅಭಿವೃದ್ಧಿಗೆ ಬದ್ಧರಿರುವುದಾಗಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.ನನ್ನ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ವಿಸ್ತರಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಯಿಂದ ₹33 ಲಕ್ಷ 50 ಸಾವಿರ ಅನುದಾನ ಮಂಜೂರಾಗಿದೆ. ಶನಿವಾರ ಕಾಮಗಾರಿಗೆ ಚಾನೆ ನೀಡಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಇದರಿಂದ ಆರೋಗ್ಯ ಅಧಿಕಾರಿಗಳು, ನೌಕರರ ಜೊತೆಗೆ ರೋಗಿಗಳ ಪರದಾಡುತ್ತಿದ್ದರು. ಈ ಹಿಂದೆ ಸಹ ಅನುದಾನ ನೀಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿಗೊಳಿಸಲಾಗಿತ್ತು. ಆರೋಗ್ಯ ಕೇಂದ್ರದ ಮೂಲಸೌಕರ್ಯಗಳ ಸುಧಾರಣೆಗೆ ಸಾಧ್ಯವಿರುವ ಎಲ್ಲ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.
ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ರೋಗಗಳನ್ನು ಪರಿಗಣಿಸಿ ಬೇಡಕಿಹಾಳ, ಬೋರಗಾಂವ, ಕಾರದಗಾ, ಬೇನಾಡಿ, ಸೌಂದಲಗಾ ಐದು ಪಿಎಚ್‌ಸಿ ಕೇಂದ್ರಗಳಿಗೆ ₹1 ಕೋಟಿ 45 ಲಕ್ಷ ಅನುದಾನ ಮಂಜೂರಾಗಿದೆ. ಬೇನಾಡಿ ಆರೋಗ್ಯ ಕೇಂದ್ರದಲ್ಲಿ ಒಂದು ಕೊಠಡಿ, ಸಭಾಂಗಣ, ಪೂರ್ಣ ತಾರಸಿಗೆ ಶೆಡ್ ಹಾಕಿ ಗುಣಮಟ್ಟದ ಕಾಮಗಾರಿ ಮೂಲಕ ಸದೃಢ ಕೇಂದ್ರವಾಗಿಸಲಾಗುವುದು ಎಂದರು.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎ.ಎಸ್. ಮುಜಾವರ, ಬಬನ್ ಹವಾಲ್ದಾರ್, ಸಾತಪ್ಪ ಖೋತ, ಅರುಣ ಜಾವೀರ್, ರಾವಸಾಹೇಬ ಜನವಾಡೆ, ಬಾಳಗೊಂಡ ಪಾಟೀಲ, ಬಾಳಾಸೋ ಖೋತ, ಪಾಂಡುರಂಗ ಪಾಟೀಲ, ಅಶೋಕ ಕ್ಷೀರಸಾಗರ, ಭರತ ಮಂಗಾವತೆ, ವಿನೋದ ಮಗದುಮ್, ಮಹಾದೇವ ಬೋಥೆ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಸಹಾಯಕರು, ಕಾರ್ಯಕರ್ತರು ಇದ್ದರು.