ಎಸ್ಸಿ,ಎಸ್ಟಿ ದೌರ್ಜನ್ಯ ತಡೆಗೆ 33 ಠಾಣೆ

| Published : Jun 21 2024, 01:02 AM IST

ಸಾರಾಂಶ

ಸಚಿವ ಸಂಪುಟ ಸಭೆಯಲ್ಲಿ ಎಸ್ಸಿ ಎಸ್ಟಿ ವ್ಯಕ್ತಿಗಳ ಹಕ್ಕು ರಕ್ಷಣೆಗೆ ಇರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್‌ ಠಾಣೆಗಳಾಗಿ ಘೋಷಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವ್ಯಕ್ತಿಗಳ ಹಕ್ಕು ರಕ್ಷಣೆಗೆ ಇರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್‌ ಠಾಣೆಗಳಾಗಿ ಘೋಷಿಸಲು ಹಾಗೂ ಸಂಬಂಧಪಟ್ಟ ಠಾಣೆಗಳ ನಿರ್ವಹಣೆಗಾಗಿ 450 ಹೆಚ್ಚುವರಿ ಹುದ್ದೆಗಳಿಗೆ ಮಂಜೂರಾತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ರಾಜ್ಯದಲ್ಲಿ ಎಸ್ಸಿ,ಎಸ್ಟಿ ವ್ಯಕ್ತಿಗಳ ಮೇಲಿನ ದೌರ್ಜನ್ಯ, ಜಾತಿ ನಿಂದನೆಯಂತಹ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ. ಈ ಬಗ್ಗೆ ದಾಖಲಾಗುವ ಪ್ರಕರಣಗಳಲ್ಲಿ ಶೇ.96 ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಹೀಗಾಗಿ ವಿಶೇಷ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದ್ದಾರೆ.

ಎಸ್ಸಿ,ಎಸ್ಟಿ ವ್ಯಕ್ತಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಬಂಧ ವಿಶೇಷ ಪೊಲೀಸ್‌ ಠಾಣೆಗಳಲ್ಲಿ ದೂರು ಸಲ್ಲಿಸಬಹುದು. ಒಂದೊಮ್ಮೆ ಬೇರೆ ಠಾಣೆಗಳಲ್ಲಿ ದೂರು ದಾಖಲಿಸಿದರೂ ಅದು ವಿಶೇಷ ಪೊಲೀಸ್‌ ಠಾಣೆಗಳಿಗೆ ವರ್ಗಾವಣೆಯಾಗಲಿದೆ ಎಂದು ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಹಾಗೂ ಗೃಹ ಇಲಾಖೆ ಎರಡೂ ಸೇರಿ ಪ್ರಸ್ತಾವನೆ ಸಲ್ಲಿಸಿದ್ದವು. 2022ರಲ್ಲಿ ಎಸ್ಸಿ,ಎಸ್ಟಿ ವ್ಯಕ್ತಿಗಳ ಹಕ್ಕು ರಕ್ಷಣೆಗೆ ಸಂಬಂಧಿಸಿದಂತೆ 2022ರಲ್ಲಿ 1,723 ಪ್ರಕರಣಗಳು ವಿಲೇವಾರಿಯಾಗಿವೆ. ಈ ಪೈಕಿ 1,363 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಶೇ. 4 ರಷ್ಟು (68) ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಹೀಗಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಗಳನ್ನು ವಿಶೇಷ ಪೊಲೀಸ್‌ ಠಾಣೆಗಳನ್ನಾಗಿ ಘೋಷಿಸಲಾಗಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.