ಚಿನ್ನ ಸ್ಮಗ್ಲರ್‌ ರನ್ಯಾ 34 ಕೋಟಿ ಆಸ್ತಿ ವಶ

| N/A | Published : Jul 05 2025, 01:48 AM IST / Updated: Jul 05 2025, 07:20 AM IST

Ranya rao highourt

ಸಾರಾಂಶ

ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು(ಇ.ಡಿ.) ಪ್ರಮುಖ ಆರೋಪಿ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

  ಬೆಂಗಳೂರು :   ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು(ಇ.ಡಿ.) ಪ್ರಮುಖ ಆರೋಪಿ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಕಾಯ್ದೆಯಡಿ ಆರೋಪಿ ರನ್ಯಾಗೆ ಸೇರಿದ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಳೆದ ಮಾ.3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ವಿದೇಶದಿಂದ 12.56 ಕೋಟಿ ರು. ಮೌಲ್ಯದ 14 ಕೆ.ಜಿ. 213 ಗ್ರಾಂ. ಚಿನ್ನಾಭರಣ ಕಳ್ಳ ಸಾಗಣೆ ಮಾಡುತ್ತಿದ್ದ ರನ್ಯಾ ರಾವ್ ರನ್ನು ಬಂಧಿಸಿದ್ದರು. ಬಳಿಕ ಆಕೆಯ ನಿವಾಸದ ಮೇಲೆ ದಾಳಿ ಮಾಡಿದಾಗ 2.67 ಕೋಟಿ ರು. ದಾಖಲೆ ಇಲ್ಲದ ನಗದು ಮತ್ತು 2.06 ಕೋಟಿ ರು. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು.

ಈ ಸಂಬಂಧ ಇ.ಡಿ. ತನಿಖೆ ವೇಳೆ ಪ್ರಮುಖ ಆರೋಪಿಗಳಾದ ರನ್ಯಾ ರಾವ್‌ ಮತ್ತು ತರುಣ್‌ ಕೊಂಡೂರು ರಾಜು ಹಾಗೂ ಇತರರು ಶಾಮೀಲಾಗಿ ವಿದೇಶದಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳು ದುಬೈ, ಉಗಾಂಡ ಹಾಗೂ ಇತರೆ ದೇಶಗಳ ಚಿನ್ನದ ವ್ಯಾಪಾರಿಗಳಿಂದ ಚಿನ್ನ ಖರೀದಿಸಿ ಬಳಿಕ ಹವಾಲಾ ಮತ್ತು ನಗದು ರೂಪದಲ್ಲಿ ಹಣ ಪಾವತಿಸುತ್ತಿದ್ದರು.

ಅಧಿಕಾರಿಗಳಿಗೆ ಸುಳ್ಳು ಹೇಳಿ ಕಳ್ಳ ಸಾಗಣೆ:

ದುಬೈನಲ್ಲಿ ತಾವು ಖರೀದಿಸುತ್ತಿದ್ದ ಚಿನ್ನವನ್ನು ಸ್ವಿಜರ್ಲೆಂಡ್‌ ಅಥವಾ ಯುಎಸ್‌ಎಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಕಸ್ಟಮ್ಸ್‌ ಅಧಿಕಾರಿಗಳಿಗೆ ಸುಳ್ಳು ಹೇಳುತ್ತಿದ್ದರು. ಎರಡು ಸೆಟ್‌ ದಾಖಲೆ ಸೃಷ್ಟಿಸಿಕೊಂಡು ಕಸ್ಟಮ್ಸ್‌ ಅಧಿಕಾರಿಗಳ ಕಣ್ಣುತಪ್ಪಿಸಿ ಭಾರತಕ್ಕೆ ಚಿನ್ನ ಸಾಗಣೆ ಮಾಡುತ್ತಿದ್ದರು. ಕಳ್ಳ ಸಾಗಣೆ ಮಾಡಿದ ಚಿನ್ನವನ್ನು ಭಾರತದೊಳಗೆ ಆಭರಣ ವ್ಯಾಪಾರಿಗಳು ಮತ್ತು ಇತರೆ ಸ್ಥಳೀಯ ಸಂಸ್ಥೆಗಳಿಗೆ ಮಾರಾಟ ಮಾಡಿ ನಗದು ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದರು. ಈ ಹಣವನ್ನು ಹವಾಲಾ ಮಾರ್ಗದಲ್ಲಿ ವಿದೇಶಗಳಿಗೆ ಸಾಗಿಸಿ ಮತ್ತೆ ಚಿನ್ನ ಖರೀದಿಸಿ ಭಾರತಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದರು ಎಂಬುದು ಇ.ಡಿ ತನಿಖೆಯಲ್ಲಿ ಬಯಲಾಗಿದೆ.

ರನ್ಯಾ ಅಕ್ರಮ ಆದಾಯ ಗಳಿಕೆ ದೃಢ:

ಆರೋಪಿಗಳ ಮೊಬೈಲ್‌ಗಳು, ಡಿಜಿಟಲ್‌ ಉಪಕರಣಗಳನ್ನು ಜಪ್ತಿ ಮಾಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಎಫ್‌ಎಸ್‌ಎಲ್‌ ವರದಿಯಲ್ಲಿ ಆರೋಪಿಗಳು ವಿದೇಶಿ ಚಿನ್ನದ ಪೂರೈಕೆದಾರರು, ಹವಾಲಾ ಏಜೆಂಟ್‌ಗಳು ಮತ್ತು ದುಬೈ ಮೂಲದ ಕಸ್ಟಮ್ಸ್‌ ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿರುವುದು ಬಹಿರಂಗಗೊಂಡಿದೆ. ಈ ಚಿನ್ನ ಕಳ್ಳ ಸಾಗಣೆ ಮುಖಾಂತರ ಪ್ರಮುಖ ಆರೋಪಿ ರನ್ಯಾ ರಾವ್‌ ಅಕ್ರಮ ಆದಾಯ ಗಳಿಸಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಚಿನ್ನ ಖರೀದಿಯ ಇನ್‌ವಾಯ್ಸ್‌ಗಳು, ರಫ್ತು ಘೋಷಣೆಗಳು, ವಿದೇಶಿ ರವಾನೆ ದಾಖಲೆಗಳು, ಚಿನ್ನ ಕಳ್ಳ ಸಾಗಣೆಯ ಸಿಂಡಿಕೇಟ್‌ ಜೊತೆಗಿನ ಚಾಟಿಂಗ್‌ಗಳು ಸೇರಿ ಹಲವು ಪುರಾವೆಗಳು ರನ್ಯಾ ರಾವ್‌ ಅವರ ಚಿನ್ನ ಕಳ್ಳ ಸಾಗಣೆ ದೃಢಪಡಿಸಿವೆ.

ಆರೋಪಕ್ಕೆ ಪೂರಕ ಸಾಕ್ಷ್ಯಗಳು ಲಭ್ಯ:

ಇನ್ನು ವಿಚಾರಣೆ ವೇಳೆ ಆರೋಪಿ ರನ್ಯಾ ರಾವ್‌ ಡಿಆರ್‌ಐ ಅಧಿಕಾರಿಗಳು ಜಪ್ತಿ ಮಾಡಿದ ಚಿನ್ನ ಮತ್ತು ಇತರೆ ಸ್ವತ್ತುಗಳ ಬಗ್ಗೆ ತನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೂ ಅವರ ಹೆಸರು, ಪ್ರಯಾಣ ಮತ್ತು ಖರೀದಿ ದಾಖಲೆಗಳು, ಡಿಜಿಟಲ್‌ ಸಂಭಾಷಣೆಗಳಿರುವ ಕಸ್ಟಮ್ಸ್‌ ದಾಖಲೆಗಳು ಸೇರಿ ಆಕೆಯಿಂದ ವಶಪಡಿಸಿಕೊಂಡಿರುವ ಹಲವು ಭೌತಿಕ ಪುರಾವೆಗಳು ಆಕೆಯ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿವೆ.

ಡಿಆರ್‌ಐ ಆರೋಪಿ ರನ್ಯಾ ರಾವ್‌ ಅವರಿಂದ 14.2 ಕೆ.ಜಿ. ಚಿನ್ನ ಮತ್ತು ಸಂಬಂಧಿತ ಆಸ್ತಿಗಳನ್ನು ಜಪ್ತಿ ಮಾಡಿದೆ. ಇ.ಡಿ ತನಿಖೆ ವೇಳೆ ರನ್ಯಾ ರಾವ್‌ ಅವರ ಒಟ್ಟು 55.62 ಕೋಟಿ ರು. ಆಸ್ತಿ ಪತ್ತೆಯಾಗಿದೆ. ಇದರಲ್ಲಿ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳ ವಿಶ್ಲೇಷಣೆ ಮುಖಾಂತರ ಗುರುತಿಸಲಾದ ಸುಮಾರು 38.22 ಕೋಟಿ ರು. ಸೇರಿದೆ. ವಿದೇಶಿ ಇನ್‌ವಾಯ್ಸ್‌ಗಳು, ಕಸ್ಟಮ್ಸ್‌ ಘೋಷಣೆಗಳು, ಹವಾಲಾ ಸಂಬಂಧಿತ ಹಣ ರವಾನೆಗಳು ಆಕೆಯ ಆದಾಯವನ್ನು ದೃಢಪಡಿಸಿವೆ.

ಅಕ್ರಮ ಹಣ ಸ್ಥಿರಾಸ್ತಿಗಳ ಮೇಲೆ ಹೂಡಿಕೆ:

ರನ್ಯಾ ರಾವ್ ಭಾರತಕ್ಕೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಹಲವರ ಸಹಾಯ ಪಡೆದಿದ್ದಾರೆ. ಅವರ ಅಕ್ರಮ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವಲ್ಲಿ ಸಾರ್ವಜನಿಕ ಸೇವಕರು ಭಾಗಿಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಚಿನ್ನ ಕಳ್ಳ ಸಾಗಣೆಯಿಂದ ಬಂದ ಆದಾಯದಲ್ಲಿ ಬಹುಭಾಗವನ್ನು ಹಂತ ಹಂತವಾಗಿ ಸ್ಥಿರ ಆಸ್ತಿಗಳಲ್ಲಿ ಮರು ಹೂಡಿಕೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

ಹೀಗಾಗಿ ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ರು. ಮೌಲ್ಯದ ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ ವಸತಿ ಮನೆ, ಅರ್ಕಾವತಿ ಲೇಔಟ್‌ನ ಫ್ಲ್ಯಾಟ್‌, ತುಮಕೂರು ಜಿಲ್ಲೆಯ ಕೈಗಾರಿಕೆ ಭೂಮಿ ಹಾಗೂ ಆನೇಕಲ್‌ ತಾಲೂಕಿನ ಕೃಷಿ ಭೂಮಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಉಳಿದ ಆದಾಯ ಮೂಲ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಇ.ಡಿ ತಿಳಿಸಿದೆ.

ಯಾವ್ಯಾವ ಆಸ್ತಿ ಮುಟ್ಟುಗೋಲು?

- ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಒಂದು ಮನೆ, ಅರ್ಕಾವತಿ ಲೇಔಟ್‌ನಲ್ಲಿರುವ ಒಂದು ಫ್ಲಾಟ್‌

- ತುಮಕೂರಲ್ಲಿರುವ ಕೈಗಾರಿಕಾ ಭೂಮಿ, ಆನೇಕಲ್‌ನಲ್ಲಿರುವ ಕೃಷಿ ಭೂಮಿ. ಒಟ್ಟು ಮೌಲ್ಯ ₹34.12 ಕೋಟಿ

ಸರ್ಕಾರಿ ಅಧಿಕಾರಿಗಳ ಪಾತ್ರ ಬಗ್ಗೆಯೂ ತನಿಖೆ

ರನ್ಯಾರಾವ್‌ ಚಿನ್ನ ಕಳ್ಳಸಾಗಣೆ ವೇಳೆ ಆಕೆಯನ್ನು ವಿಮಾನ ನಿಲ್ದಾಣದಿಂದಲೇ ಭದ್ರತೆ ನೀಡಿ ಕರೆದೊಯ್ಯಲಾಗುತ್ತಿತ್ತು. ಹೀಗಾಗಿ ಈ ಕೃತ್ಯದಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿರುವ ಕುರಿತು ಶಂಕೆ ಇದೆ. ಈ ಕುರಿತ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಮಾಹಿತಿ ನೀಡಿದೆ.

--ಇ.ಡಿ. ಹೇಳಿಕೆಯಲ್ಲೇನಿದೆ?

- ಭಾರತಕ್ಕೆ ಚಿನ್ನವನ್ನು ಕಳ್ಳ ಸಾಗಣೆ ಮಾಡಲು ಅತ್ಯಂತ ವ್ಯವಸ್ಥಿತ ಕಾರ್ಯಾಚರಣೆಯನ್ನು ಸಹವರ್ತಿಗಳ ಜತೆ ಸೇರಿ ರನ್ಯಾ ರೂಪಿಸಿದ್ದಳು

- ದುಬೈ, ಉಗಾಂಡಾ ಮತ್ತಿತರ ಕಡೆ ಇರುವ ಪೂರೈಕೆದಾರರಿಂದ ಚಿನ್ನ ಖರೀದಿಸಿ, ಹವಾಲಾ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಿದ್ದಳು

- ಸ್ವಿಜರ್ಲೆಂಡ್‌ ಅಥವಾ ಅಮೆರಿಕಕ್ಕೆ ಚಿನ್ನ ರವಾನಿಸುತ್ತಿರುವುದಾಗಿ ದುಬೈನಲ್ಲಿ ಸುಳ್ಳು ಘೋಷಣೆಗಳನ್ನು ರನ್ಯಾ ರಾವ್‌ ತಂಡ ಮಾಡುತ್ತಿತ್ತು

- ಆ ಚಿನ್ನವನ್ನು ಭಾರತಕ್ಕೆ ತಂದು ಮಾರಲಾಗುತ್ತಿತ್ತು. ಹಣವನ್ನು ವಿದೇಶಕ್ಕೆ ಹವಾಲಾ ಮೂಲಕ ಕಳಿಸಿ ಮತ್ತೆ ಚಿನ್ನ ಖರೀದಿಸಲಾಗುತ್ತಿತ್ತು

Read more Articles on