ಸಾರಾಂಶ
ರಾಣಿಬೆನ್ನೂರು: ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಘಟನೆಗೆ ಪೂರಕವಾಗಿ ನಗರದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲೂಕಿನಲ್ಲಿ ಒಂದು ವರ್ಷದಲ್ಲಿ 34 ನವಜಾತ ಶಿಶುಗಳ ಮರಣವಾಗಿರುವ ಸಂಗತಿ ಚರ್ಚೆಗೆ ಗ್ರಾಸವಾಯಿತು. ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಚರ್ಚೆ ವೇಳೆ ಶಾಸಕ ಪ್ರಕಾಶ ಕೋಳಿವಾಡ ಅಧಿಕಾರಿಗಳಿಂದ ನಮ್ಮಲ್ಲಿ ಏನಾದರೂ ಬಾಣಂತಿಯರ ಸಾವು ಸಂಭವಿಸಿದೆಯಾ? ಎಂದು ಪ್ರಶ್ನಿಸಿದಾಗ ಈ ವಿಷಯ ಬೆಳಕಿಗೆ ಬಂದಿತು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ನಮ್ಮಲ್ಲಿ ಯಾವುದೇ ಬಾಣಂತಿಯರ ಸಾವು ಆಗಿಲ್ಲ. ಆದರೆ ಜನವರಿಯಿಂದ ಇಲ್ಲಿಯವರೆಗೆ 34 ನವಜಾತ ಶಿಶುಗಳ ಮರಣವಾಗಿದ್ದು ಆ ಪೈಕಿ ಬೇರೆ ಜಿಲ್ಲೆ ಹಾಗೂ ತಾಲೂಕುಗಳ 10 ಶಿಶುಗಳಿವೆ ಎಂಬ ಮಾಹಿತಿ ನೀಡಿದರು. ಇದಕ್ಕೆ ಕಾರಣ ಕೇಳಿದಾಗ ಮಕ್ಕಳ ಹೃದಯ ಸಮಸ್ಯೆ, ಶ್ವಾಸಕೋಶ ಹಾಗೂ ಹಾಲು ಹೆಚ್ಚಾಗಿ ಕುಡಿದ ಹಿನ್ನೆಲೆ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಚರ್ಚೆ ವೇಳೆ ಮಧ್ಯ ಪ್ರವೇಶಿಸಿದ ಟಿಎಪಿಸಿಎಂಎಸ್ ಅಧ್ಯಕ್ಷ ಯಲ್ಲಪ್ಪರೆಡ್ಡಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್ ಇದ್ದರೂ ಸ್ಕ್ಯಾನಿಂಗ್ ಮಾಡುತ್ತಿಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು. ಆಗ ಆರೋಗ್ಯ ಅಧಿಕಾರಿಗಳು, ರೆಡಿಯಾಲಾಜಿಸ್ಟ್ ಇಲ್ಲದೇ ಇರುವುದರಿಂದ ಸಮಸ್ಯೆಯಾಗಿದೆ. ದಿನಕ್ಕೆ ಒಂದೆರೆಡು ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಸತಿ ನಿಲಯದಲ್ಲಿ ಬೆಡ್ ಹಾಗೂ ಕಾಟ್ ಸಮಸ್ಯೆಯಿದ್ದು, ಕೆಲವೊಂದು ಕಡೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಿ ನೆಲದ ಮೇಲೆ ಮಲಗುವಂತಾಗಿದೆ ಎಂದು ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.ಇದಕ್ಕೆ ಸ್ಪಂದಿಸಿದ ಶಾಸಕ ಪ್ರಕಾಶ ಕೋಳಿವಾಡ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಎಲ್ಲಾ ಸೌಲಭ್ಯ ಸೌಕರ್ಯಗಳನ್ನು ಒದಗಿಸಬೇಕು. ಕಾಟ್ ಹಾಗೂ ಬೆಡ್ ಸರಿಯಾಗಿ ಸರಬರಾಜು ಮಾಡಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಬೇಕು. ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನ, ಅಂಬೇಡ್ಕರ್, ಬಾಬು ಜಗಜೀವನರಾಮ ಭವನಗಳ ಸದ್ಬಳಕೆಯಾಗುತ್ತಿಲ್ಲ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಕುರಿತು ನನಗೆ ದೂರುಗಳು ಬಂದಿವೆ. ಮುಂದಿನಗಳ ಈ ಭವನಗಳ ಬಳಕೆಗೆ ಅಗತ್ಯ ಕ್ರಮ ಜರುಗಿಸಿ ಎಂದು ಅಧಿಕಾರಿಗೆ ಸೂಚಿಸಿದರು. ಶಾಲಾ ಕೊಠಡಿಗಳ ಬದಲಿಗೆ ಶಿಕ್ಷಕರ ವ್ಯವಸ್ಥೆ ಅತ್ಯಗತ್ಯ. ಮಕ್ಕಳ ಪೌಷ್ಟಿಕ ಆಹಾರದ ಬಗ್ಗೆ ಗಮನ ಹರಿಸಿ. ಶಾಲಾ ಮಕ್ಕಳಿಗೆ ವಾರಪೂರ್ತಿ ಮೊಟ್ಟೆ ಕೊಡಲು ಆರ್ಥಿಕ ನೆರವು ನೀಡಿದ ಅಜೀಂ ಪ್ರೇಮ್‌ಜಿ ಅವರಿಗೆ ಅಭಿನಂದನೆ ಸಲ್ಲಬೇಕು. ಜೆಜೆಎಂ ಮೂಲಕ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೀರು ತಲುಪಿದೆಯಾ ಪರಿಶೀಲಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕ ಪ್ರಕಾಶ ಕೋಳಿವಾಡ ಸೂಚಿಸಿದರು. ಒಂದು ಲಕ್ಷ ಸಸಿ ನೆಡುವ ಚಿಂತನೆ:ಅರಣ್ಯ ಇಲಾಖೆ ಮೇಲಿನ ಚರ್ಚೆ ವೇಳೆ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮುಂದಿನ ಜೂನ್ 5ರ ಪರಿಸರ ದಿನದಂದು ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ತಾಲೂಕಿನಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವ ಚಿಂತನೆಯಿದೆ. ನಿಮ್ಮ ಇಲಾಖೆಯಲ್ಲಿ ಅದಕ್ಕೆ ಬೇಕಾದ ಅನುದಾನ ಲಭ್ಯವಿದೆಯಾ ಪರಿಶೀಲಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಎಂದರು. ಉಪ ವಿಭಾಗಾಧಿಕಾರಿ ಡಾ.ರಂಗನಾಥ, ತಾಪಂ ಇಒ ಪರಮೇಶ, ತಹಸೀಲ್ದಾರ ಆರ್.ಎಚ್. ಭಾಗವಾನ, ನಗರಸಭೆ ಪೌರಾಯುಕ್ತ ಎಫ್.ಐ.ಇಂಗಳಗಿ, ಶಹರ ಸಿಪಿಐ ಡಾ. ಶಂಕರ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಂಜನಗೌಡ ಪಾಟೀಲ ವೇದಿಕೆಯಲ್ಲಿ ಇದ್ದರು.ಮುಂದಿನ ಸಲದಿಂದ ನಾಡಗೀತೆಗೆ ಅಗೌರವ ತೋರುವಂತಾಗಬಾರದು. ಮುದ್ರಿತ ಹಾಡಿನ ಬದಲಿಗೆ ಶಾಲಾ ಮಕ್ಕಳಿಂದಾಗಲಿ ಅಥವಾ ಜನಪದ ಕಲಾವಿದರಿಂದ ನಾಡಗೀತೆ ಹಾಡಿಸಲು ಅಗತ್ಯ ಕ್ರಮ ಜರುಗಿಸಿ.ಇಲಾಖೆಯ ಸಮಸ್ಯೆಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿ. ಪ್ರಗತಿ ಓದುವುದು ಬೇಡ. ಇಲಾಖೆಯ ಸಮಸ್ಯೆಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿ. ಪ್ರಗತಿ ಓದುವುದು ಬೇಡ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.