ಹೊನ್ನಾವರ ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಪ್ರವಾಸಿ ಬಸ್‌ ಪಲ್ಟಿಯಾಗಿ 34 ವಿದ್ಯಾರ್ಥಿಗಳಿಗೆ ಗಾಯ

| Published : Dec 21 2024, 01:17 AM IST

ಹೊನ್ನಾವರ ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಪ್ರವಾಸಿ ಬಸ್‌ ಪಲ್ಟಿಯಾಗಿ 34 ವಿದ್ಯಾರ್ಥಿಗಳಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ವಾಹನದಲ್ಲಿದ್ದ 40 ಶಾಲಾ ಮಕ್ಕಳ ಪೈಕಿ 34 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಪೊಲೀಸ್‌ ಮತ್ತು ಸ್ಥಳೀಯರ ಸಹಕಾರದೊಂದಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಹೊನ್ನಾವರ: ಕೋಲಾರದಿಂದ ಉತ್ತರಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿದ್ದ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ 34ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರವಾಸ ವಾಹನವು ಜಿಲ್ಲಾ ಪ್ರವಾಸ ಮುಗಿಸಿಕೊಂಡು ಗೋಕರ್ಣದಿಂದ ಪುನಃ ಕೋಲಾರಕ್ಕೆ ಹೋಗುವಾಗ ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

ವಾಹನದಲ್ಲಿದ್ದ 40 ಶಾಲಾ ಮಕ್ಕಳ ಪೈಕಿ 34 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಪೊಲೀಸ್‌ ಮತ್ತು ಸ್ಥಳೀಯರ ಸಹಕಾರದೊಂದಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ತಪ್ಪಿದ ದೊಡ್ಡ ಅವಘಡ: ಅಪಘಾತದಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ವಿದ್ಯುತ್ ಶಾರ್ಟ್‌ ಸರ್ಕಿಟ್ ಅಥವಾ ವಿದ್ಯುತ್ ತಂತಿ ತಗುಲಿದಲ್ಲಿ ಮತ್ತೊಂದು ದೊಡ್ಡ ಅವಘಡವಾಡುವ ಸಂಭವವಿತ್ತು. ಅಲ್ಲದೇ ವಿದ್ಯುತ್‌ ಕಂಬದ ಬಳಿ ತಡೆಗೋಡೆ ಇದ್ದು, ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದು ತಡೆಗೋಡೆಗೆ ತಾಗಿ ಬಿದ್ದಿದೆ. ಇಲ್ಲವಾದಲ್ಲಿ ಆರೋಳ್ಳಿಯಲ್ಲಿನ ನೂರಾರು ಅಡಿ ಆಳದ ಕಂದಕಕ್ಕೆ ಬಸ್ ಬೀಳುತ್ತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಆಸ್ಪತ್ರೆಗೆ ತಹಸೀಲ್ದಾರ್ ಪ್ರವೀಣ ಎಸ್. ಕರಾಂಡೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಅಲ್ಲದೇ ಅಗತ್ಯ ಚಿಕಿತ್ಸೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದರು. ಹೊನ್ನಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಸಚಿವ ಮಂಕಾಳ ವೈದ್ಯ

ಹೊನ್ನಾವರ: ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಬಸ್ ಪಲ್ಟಿಯಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳನ್ನು ಸಚಿವ ಮಂಕಾಳ ವೈದ್ಯ ಭೇಟಿಯಾಗಿ ಆರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬಿದರು.ಶುಕ್ರವಾರ ನಿಗದಿಯಾಗಿದ್ದ ಅಧಿಕಾರಿಗಳ ಸಭೆಗೂ ಪೂರ್ವದಲ್ಲಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಗ್ಯ ವಿಚಾರಿಸಿ ಅವರು ವಾಪಸ್‌ ತೆರಳಲು ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಿ ತಾಲೂಕು ಆಸ್ಪತ್ರೆಗೆ ಆಗಮಿಸಿದರು.ಪ್ರತಿ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿದ ಬಳಿಕ ಅವರಿಗೆ ಧೈರ್ಯ ತುಂಬಿ ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿನಿಯರನ್ನು ಹಾಗೂ ಪ್ರೌಢಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಸಮಸ್ಯೆ ಆಲಿಸಿದರು.

ನಂತರ ಮಧ್ಯಾಹ್ನದ ಊಟ ನೀಡಿ ಕೆಎಸ್‌ಆರ್‌ಟಿಸಿ ಬಸ್ ಮೂಲಕ ತೆರಳಲು ವ್ಯವಸ್ಥೆ ಕಲ್ಪಿಸಿದರು. ಈ ಎಲ್ಲ ಕಾರ್ಯ ಮುಗಿಸಲು ಸ್ಥಳದಲ್ಲಿ ಅಧಿಕಾರಿಗಳು ಜತೆ ಆಪ್ತ ಸಹಾಯಕರು ಹಾಗೂ ಕಾರ್ಯಕರ್ತರನ್ನು ನಿಯೋಜಿಸಿ ತೆರಳಿದರು.