ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ ₹340 ಕೋಟಿ ಬಿಡುಗಡೆ: ಶಾಸಕ ತಮ್ಮಯ್ಯ

| Published : May 22 2025, 01:03 AM IST

ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ ₹340 ಕೋಟಿ ಬಿಡುಗಡೆ: ಶಾಸಕ ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹340 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

ಗ್ಯಾರಂಟಿ ಅನುಷ್ಟಾನದ ಜತೆಗೆ ಕ್ಷೇತ್ರದಲ ಹಲವು ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹340 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ ಇದರ ಜತೆಗೆ ಭದ್ರ ಉಪ ಕಣಿವೆ ಯೋಜನೆಯಡಿ ಚಿಕ್ಕಮಗಳೂರು ಹಾಗೂ ಕಡೂರು ಭಾಗದ ಕೆರೆ ತುಂಬಿಸುವ ಯೋಜನೆಯ 3ನೇ ಹಂತದ ಕಾಮಗಾರಿಗೆ ₹407.50 ಕೋಟಿ ರು. ಮೊತ್ತಕ್ಕೆ ಟೆಂಡರ್‌ ಕರೆಯಲು ವಿಶ್ವೇಶ್ವರಯ್ಯ ಜಲ ನಿಗಮ ತೀರ್ಮಾನ ಕೈಗೊಂಡಿದೆ. ಇದರಿಂದ ಸುಮಾರು 197 ಕೆರೆಗಳಿಗೆ ನೀರು ಸಿಗಲಿದೆ ಎಂದರು.

2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರ ₹189 ಕೋಟಿ ಅನುದಾನ ನೀಡಿದ್ದು, ಬಹಳಷ್ಟು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. 2024-25ನೇ ಸಾಲಿನಲ್ಲಿ ₹340 ಕೋಟಿ ಗಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹6.50 ಕೋಟಿ, ಜಿಲ್ಲಾ ಮುಖ್ಯ ರಸ್ತೆ ಹಾಗೂ ಇತರೆ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ₹41.5 ಕೋಟಿ ಮಂಜೂರಾಗಿದ್ದು ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಅತೀವೃಷ್ಠಿ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಕಟ್ಟಡಗಳ ದುರಸ್ಥಿ ಕಾಮಗಾರಿಗಳಿಗೆ ₹2.90 ಕೋಟಿ, ಜಿಲ್ಲಾ ಗ್ರಾಹಕರ ಆಯೋಗದ ಕಟ್ಟಡದ ನವೀಕರಣ ಂ₹36.26 ಲಕ್ಷ ಅನುದಾನ ಮಂಜೂರಾಗಿದೆ ಎಂದ ಶಾಸಕರು, ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಉನ್ನತೀಕರಣಕ್ಕೆ ₹19.87 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇಂದು ಟೆಂಡರ್‌ ಕೂಡ ಕರೆಯಲಾಗಿದೆ ಎಂದರು.

ಗ್ರಾಮೀಣ ಸೇತುವೆ, ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹10 ಕೋಟಿ ಬಿಡುಗಡೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಕಾರ್ಯಕ್ರಮದಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ₹150 ಲಕ್ಷ ಅನುದಾನ ಹಂಚಿಕೆಯಾಗಿದೆ. ಶಾಲಾ ಕಟ್ಟಡಗಳ ದುರಸ್ತಿಗೆ ₹16.50 ಲಕ್ಷ ಬಿಡುಗಡೆಯಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರಿನ ಶತಮಾನೋತ್ಸವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್‌ ಹಾಗೂ ಇತರೆ ಕಾಮಗಾರಿಗಳಿಗೆ ಈ ಹಿಂದೆ ₹6.74 ಕೋಟಿ ರು. ಯೋಜನೆ ರೂಪಿಸಿ ₹3.37 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸದೆ ಇದ್ದರಿಂದ ಕಾಮಗಾರಿ ನೆನಗುದ್ದಿಗೆ ಬಿದ್ದಿದ್ದು ಪರಿಷ್ಕೃತ ಅಂದಾಜು ₹7.49 ಕೋಟಿ ಯೋಜನೆ ಸಿದ್ಧಪಡಿಸಿದ್ದು, ಈಗಾಗಲೇ ₹2 ಕೋಟಿ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದರು.

ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ಮುಖ್ಯ ರಸ್ತೆಗಳ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಎಸ್‌ಎಫ್‌ಸಿ ಯೋಜನೆಯಡಿ ₹10 ಕೋಟಿ ವಿಶೇಷ ಅನುದಾನ ಮಂಜೂರು ಮಾಡಲಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್‌ ಅಹಮದ್‌, ಕೆಪಿಸಿಸಿ ವಕ್ತಾರ ರವೀಶ್‌ ಕ್ಯಾತನಬೀಡು, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಸಖರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಡಿಮನೆ ಸತೀಶ್‌, ತನೋಜ್‌ ನಾಯ್ಡು, ವಕ್ತಾರ ರೂಬಿನ್‌ ಮೋಸಸ್‌ ಇದ್ದರು.

--ಬಾಕ್ಸ್--

ಸಚಿವರಿಗೆ ಪತ್ರ:ಚಿಕ್ಕಮಗಳೂರು ನಗರದಲ್ಲಿ ಕೈಗೊಂಡಿರುವ ಒಳಚರಂಡಿ ಹಾಗೂ ಅಮೃತ್‌ ಯೋಜನೆ ಕಾಮಗಾರಿಯಲ್ಲಿ ಹಲವು ನೂನ್ಯತೆಗಳು ಕಂಡು ಬಂದಿದೆ. ಈ ಕಾರಣಕ್ಕಾಗಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿವೇಶನ ನೀಡಲು 42 ಎಕರೆ ಜಾಗ ಗುರುತಿಸಲಾಗಿದ್ದು, ಈ ವರ್ಷದಲ್ಲಿ ಸುಮಾರು ಒಂದು ಸಾವಿರ ನಿವೇಶನ ನೀಡಲಾಗುವುದು ಎಂದರು.

21 ಕೆಸಿಕೆಎಂ 1ಚಿಕ್ಕಮಗಳೂರಿನಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.