ಸಾರಾಂಶ
35 ಕುರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
35 ಕುರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.ಮುತಿಗಿ ಗ್ರಾಮದ ಸಣ್ಣ ಹುಚ್ಚಪ್ಪನವರ ಕೊಟ್ರಪ್ಪನವರಿಗೆ ಸಂಬಂಧಿಸಿದ ಒಟ್ಟು 130 ರಲ್ಲಿ 35 ಕುರಿಗಳು ಬುಧವಾರ ಮಧ್ಯಾಹ್ನ ನೀರು ಕುಡಿಸಲು ಹೋದ ವೇಳೆ ಪ್ರಾಣ ಬಿಟ್ಟಿವೆ.
ಅತಿಯಾದ ಮಳೆಯಾಗಿ ಕುರಿಗಳು ಹಲವಾರು ಕಾಯಿಲೆಗಳಿಗೆ ತುತ್ತಾಗಿದ್ದವು. ಆದ್ದರಿಂದ ಹರಪನಹಳ್ಳಿಯ ಖಾಸಗಿ ಔಷಧಿ ಅಂಗಡಿಯೊಂದರಲ್ಲಿ ಔಷಧ ತಂದು ಕುರಿಗಳಿಗೆ ಹಾಕಲಾಗಿತ್ತು. ಔಷಧ ಹಾಕಿದ್ದರಿಂದಲೇ ಕುರಿಗಳು ಸತ್ತಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ್ದಾರೆ.ಕುರಿಗಳ ಮಾಲೀಕ ಸಣ್ಣ ಹುಚ್ಚಪ್ಪನವರ ಕೊಟ್ರಪ್ಪ ಮಾತನಾಡಿ. ನಾವು ಹಲವಾರು ವರ್ಷಗಳಿಂದ ಕುರಿಗಳನ್ನು ಲಕ್ಷ್ಮೀ ಎಂದು ಪೂಜಿಸುತ್ತಾ ಅವುಗಳನ್ನೇ ನಂಬಿ ಜೀವನ ಮಾಡುತ್ತಾ ಬಂದಿದ್ದೇವೆ, ಏಕಾಏಕಿ ಕುರಿಗಳು ಈ ರೀತಿಯಾಗಿ ಸತ್ತಿವೆ. ನಮ್ಮ ಜೀವನ ನಿರ್ವಹಣೆಗೆ ದಾರಿದೀಪವಾಗಿದ್ದ ಕುರಿಗಳನ್ನು ಕಳೆದುಕೊಂಡು ಕುಟುಂಬವು ಸಂಕಷ್ಟಕ್ಕೀಡಾಗಿದೆ. ಮೊನ್ನೆ ದಿನ ಕುರಿಗಳಿಗೆ ಔಷಧ ನೀಡಲಾಗಿತ್ತು. ಅದನ್ನು ಬಿಟ್ಟರೆ ಬೇರೆ ಯಾವ ಕಾರಣವೂ ಇಲ್ಲ, ಒಟ್ಟು 130ರಲ್ಲಿ 60 ಕುರಿಗಳು ಅಸ್ವಸ್ಥಗೊಂಡಿವೆ. 35 ಕುರಿಗಳು ಸತ್ತಿವೆ. ಬದುಕಿರುವ ಕುರಿಗಳಿಗೆ ವೈದ್ಯರು ಔಷಧ ನೀಡಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ನಮ್ಮ ಬದುಕು ಕಷ್ಟದಾಯಕವಾಗುತ್ತದೆ ಎಂದು ಅಳಲು ತೊಡಿಕೊಂಡರು.
ಪಶು ವೈದ್ಯಾಧಿಕಾರಿ ಶಿವಕುಮಾರ್ ಮಾತನಾಡಿ. ಔಷಧಿ ಸೇವಿಸಿ ಮೃತಪಟ್ಟಿರುವ ಬಗ್ಗೆ ಕುರಿ ಮಾಲೀಕರು ತಿಳಿಸಿದ್ದಾರೆ. ಸತ್ತಿರುವ ಕುರಿಗಳ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸುತ್ತಿದ್ದೇವೆ. ಇನ್ನೂ ಎರಡ್ಮೂರು ದಿನಗಳಲ್ಲಿ ವರದಿ ಬಂದ ನಂತರ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.