ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ₹350 ಕೋಟಿ ತೆಗೆದಿರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹100 ಕೋಟಿ ಕಡಿಮೆ ಹಣವನ್ನು ಈ ಬಾರಿ ನೀಡಲಾಗುತ್ತಿದೆ.

ನವದೆಹಲಿ: ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ₹350 ಕೋಟಿ ತೆಗೆದಿರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹100 ಕೋಟಿ ಕಡಿಮೆ ಹಣವನ್ನು ಈ ಬಾರಿ ನೀಡಲಾಗುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಯು 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದುವ ಮಹತ್ವಾಕಾಂಕ್ಷಿ ಯೋಜನೆ. ಈ ರೈಲು ಯೋಜನೆಯಡಿ 148 ಕಿ.ಮೀ. ರೈಲು ಮಾರ್ಗ ನಿರ್ಮಿಸುವ ಉದ್ದೇಶವಿದ್ದು, ಇದಕ್ಕಾಗಿ ₹15,767 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.40ರಷ್ಟು ಹಣ ವೆಚ್ಚ ಮಾಡಲಿದ್ದು, ಉಳಿದ ಹಣವನ್ನು ಪರ್ಯಾಯ ಮೂಲಗಳಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ.

ಸದ್ಯ ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯು ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ಕಾರಿಡಾರ್‌ ನಡುವೆ ಕಾಮಗಾರಿ ನಡೆಸುತ್ತಿದೆ. ಈ ಯೋಜನೆಯನ್ನು ಮೋದಿ ಸರ್ಕಾರ ಮುಂದಿನ 40 ತಿಂಗಳಲ್ಲಿ ಆದ್ಯತೆ ಮೇಲೆ ಪೂರ್ಣಗೊಳಿಸುವ ಗುರಿ ಇರಿಸಿದೆ. ಈ ಬಾರಿಯ ಬಜೆಟ್ನಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಯೋಜನೆಗೆ ₹350 ಕೋಟಿ ಅನುದಾನ ಘೋಷಣೆ ಮಾಡಿರುವುದನ್ನು ಸಂಸದ ಪಿ.ಸಿ.ಮೋಹನ್ ಸ್ವಾಗತಿಸಿದ್ದಾರೆ.

ಉಪನಗರ ರೈಲು ಕನಸು ನನಸು

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬೆಂಬಲದೊಂದಿಗೆ ಬೆಂಗಳೂರು ಉಪನಗರ ರೈಲು ಯೋಜನೆಗೆ ₹350 ಕೋಟಿ ಅನುದಾನ ನೀಡಲಾಗಿದೆ. ಇದರೊಂದಿಗೆ ಬೆಂಗಳೂರಿಗರ 40 ವರ್ಷಗಳ ಉಪನಗರ ರೈಲು ಕನಸು ನನಸಾಗುವುದು ಸನ್ನಿಹಿತವಾಗಿದೆ. ಈ ಯೋಜನೆಯನ್ನು ಇನ್ನು 40 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ.

-ಪಿ.ಸಿ.ಮೋಹನ್‌, ಸಂಸದ.