ಸಾರಾಂಶ
ಕೂಟ ಮಹಾಜಗತ್ತು ಸಾಲಿಗ್ರಾಮದ ಕಾಟಿಪಳ್ಳ- ಕೃಷ್ಣಾಪುರ ಅಂಗಸಂಸ್ಥೆಯ 36ನೇ ವಾರ್ಷಿಕ ಮಹಾಸಭೆ ಶ್ರೀ ಗುರು ನರಸಿಂಹ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಮಂಗಳೂರು:
ಕೂಟ ಮಹಾಜಗತ್ತು ಸಾಲಿಗ್ರಾಮದ ಕಾಟಿಪಳ್ಳ- ಕೃಷ್ಣಾಪುರ ಅಂಗಸಂಸ್ಥೆಯ 36ನೇ ವಾರ್ಷಿಕ ಮಹಾಸಭೆ ಶ್ರೀ ಗುರು ನರಸಿಂಹ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.ಕೂಟ ಜಗತ್ತಿನ ಅಂಗಸಂಸ್ಥೆಗಳಲ್ಲಿ 8ನೇ ಅಂಗಸಂಸ್ಥೆಯಾಗಿ ಆರಂಭವಾದ ಕೃಷ್ಣಾಪುರ ಸಂಸ್ಥೆಯ ಕಾರ್ಯವೈಖರಿಯನ್ನು ಸಾಲಿಗ್ರಾಮ ಶ್ರೀಗುರು ನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸೀತಾರಾಮ ಕಾರಂತ ಪ್ರಶಂಸಿಸಿದರು. ಕೂಟಮಹಾಜಗತ್ತು ಪ್ರಜಾಸತ್ತಾತ್ಮಕವಾಗಿ ಬೆಳೆಯುತ್ತಿರುವ ಒಂದು ವಿಶಿಷ್ಟ ವಿಪ್ರ ಸಮುದಾಯವಾಗಿರುತ್ತದೆ. ಇದನ್ನು ಇನ್ನೂ ಸಧೃಢಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಗಸಂಸ್ಥೆಯ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿ ಉಪಾಧ್ಯಕ್ಷ ಪಿ. ಸದಾಶಿವ ಐತಾಳ ಮಾತನಾಡಿ, ಸಮಾಜ ಬಾಂಧವರ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ಹಾಗೂ ಅಸಕ್ತರಿಗೆ ಸಹಾಯ ನೀಡಿ ಸಹಕರಿಸಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭ ವಿವಿಧೋದ್ದೇಶ ದತ್ತಿ ಮಂಡಳಿ ಅಧ್ಯಕ್ಷ ಪಿ. ಪುರುಷೋತ್ತಮ ರಾಯರು ಗುರು ನರಸಿಂಹ ಸಭಾ ಭವನದ ಅಭಿವೃದ್ಧಿ ಕಾರ್ಯವನ್ನು ವಿವರಿಸಿದರು. ಮಹಿಳಾ ವೇದಿಕೆಯ ಕಾರ್ಯಗಳನ್ನು ಅಧ್ಯಕ್ಷೆ ಸುಶೀಲಾ ಎಸ್. ರಾವ್ ಸಭೆಯ ಮುಂದಿಟ್ಟರು. ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನೂತನ ಉಪಾಧ್ಯಕ್ಷರಾಗಿ ಪರಮೇಶ್ವರ ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಯಿತು. ಸುಮಾರು 150 ಸದಸ್ಯರು ಭಾಗವಹಿಸಿದ ವಾರ್ಷಿಕ ಮಹಾಸಭೆಯಲ್ಲಿ ಕೋಶಾಧಿಕಾರಿ ವಿಷ್ಣುಮೂರ್ತಿ ಮಯ್ಯ ಆಯವ್ಯಯ ಮಂಡಿಸಿದರು. ಕಾರ್ಯದರ್ಶಿ ಸದಾಶಿವ ಕಾರಂತ ವಂದಿಸಿದರು. ಹಿರಿಯ ಸದಸ್ಯೆ ಯಮುನಾ ಪಿ. ರಾವ್ ಕಾರ್ಯಕ್ರಮ ನಿರ್ವಹಿಸಿದರು. ಬಿಲಿಯನ್ ಫೌಂಡೇಶನ್ ಪ್ರತಿನಿಧಿ ಡಾ. ಕೃಷ್ಣ ಉಪಾಧ್ಯಾಯ, ಮಹಿಳಾ ವೇದಿಕೆ ಕಾರ್ಯದರ್ಶಿ ವಿಜಯಲಕ್ಷ್ಮೀ, ದತ್ತಿ ಮಂಡಳಿ ಕಾರ್ಯದರ್ಶಿ ನಾರಾಯಣ ನಾವಡ ಇದ್ದರು.