ಸಿಂಗಟಾಲೂರು ಏತ ನೀರಾವರಿ ಯೋಜನೆಯ ಸಂತ್ರಸ್ತರ ಅನುಕೂಲಕ್ಕಾಗಿ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಬಿಡುಗಡೆಯಾಗಲಿದೆ

ಚಂದ್ರು ಕೊಂಚಿಗೇರಿ ಹೂವಿನಹಡಗಲಿ

ವಿಜಯನಗರ, ಗದಗ ಮತ್ತು ಹಾವೇರಿ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸುವ ಮಾಗಳ-ಕಲ್ಲಾಗನೂರು ಸೇತುವೆ ನಿರ್ಮಾಣಕ್ಕೆ ₹37.50 ಕೋಟಿಗಳ ಕ್ರಿಯಾ ಯೋಜನೆಯು ಕಳೆದೊಂದು ವರ್ಷದಿಂದ ಕರ್ನಾಟಕ ನೀರಾವರಿ ನಿಗಮದಲ್ಲೇ ಧೂಳು ತಿನ್ನುತ್ತಿದೆ.

ಹೌದು, ತಾಲೂಕಿನ ಮಾಗಳ-ಕಲ್ಲಾಗನೂರು ಮಧ್ಯೆ ಸೇತುವೆ ನಿರ್ಮಾಣ ದಶಕಗಳ ಬೇಡಿಕೆಯಾಗಿತ್ತು. ಆರಂಭದಿಂದ ಹತ್ತಾರು ಸಮಸ್ಯೆಗಳ ಸುಳಿಯಲ್ಲಿದ್ದ ಸೇತುವೆ ನಿರ್ಮಾಣದ ಸ್ಥಳ ನಿಗದಿ ಕುರಿತು ಸಚಿವ-ಶಾಸಕರ ಮಧ್ಯೆ ಹಗ್ಗಾಜಗ್ಗಾಟ, ಪತ್ರಗಳ ಚಳವಳಿ ನಡೆದಿತ್ತು. ಕೊನೆಗೆ ಮಾಗಳ- ಕಲ್ಲಾಗನೂರು ಮಧ್ಯೆ ಸ್ಥಳ ಅಂತಿಮಗೊಂಡಿತ್ತು.

ಈ ಹಿಂದೆ ಲಕ್ಷ್ಮೇಶ್ವರದ ಮಾಜಿ ಶಾಸಕ ಉಪನಾಶ ಗೂಳಪ್ಪ ಸೇರಿದಂತೆ ಅನೇಕ ಸಂಘಟನೆಗಳ ಸುದೀರ್ಘ ಹೋರಾಟದ ಫಲವಾಗಿಯೇ ಇಂದು ಸೇತುವೆ ನಿರ್ಮಾಣದ ಕನಸು ನನಸಾಗುವ ಸಮಯ ಬಂದಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಸಂತ್ರಸ್ತರ ಅನುಕೂಲಕ್ಕಾಗಿ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಬಿಡುಗಡೆಯಾಗಲಿದೆ.

ನೀರಾವರಿ ಇಲಾಖೆಯ ತಾಂತ್ರಿಕ ತಜ್ಞರ ವರದಿಯಂತೆ ಸೇತುವೆ ನಿರ್ಮಾಣ ಸ್ಥಳ ನಿಗದಿಯಾಗಿದ್ದು, ಮೊದಲು ₹70 ಕೋಟಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಸರ್ಕಾರದಲ್ಲಿ ಅನುದಾನ ಕೊರತೆಯಿಂದ ಮತ್ತೆ ಕ್ರಿಯಾ ಯೋಜನೆಯನ್ನು ₹37.50 ಕೋಟಿಗಳಿಗೆ ಅಂತಿಮಗೊಳಿಸಲಾಗಿದೆ.

ಕಳೆದ ಸೆ.10, 2025 ರಲ್ಲಿ ₹37.50 ಕೋಟಿಗಳ ಕ್ರಿಯಾ ಯೋಜನೆ ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರಿಗೆ ಸಲ್ಲಿಕೆಯಾಗಿದೆ. ಈ ಕುರಿತು ಅಂದಾಜು ಪರಿಶೀಲನಾ ಸಮಿತಿಯಲ್ಲಿಯೂ ಚರ್ಚೆಯಾಗಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಆದರೆ ಕಳೆದೊಂದು ವರ್ಷದಿಂದ ನೀರಾವರಿ ನಿಗಮದಲ್ಲೇ ಕ್ರಿಯಾ ಯೋಜನೆ ಧೂಳು ತಿನ್ನುತ್ತಿದೆ. ಈವರೆಗೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಈ ಕುರಿತು ಸರ್ಕಾರ ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುದಾನ ಕೂಡಲೇ ಬಿಡುಗಡೆ ಮಾಡದಿದ್ದರೇ ಮತ್ತೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಿಂಗಟಾಲೂರು ಯೋಜನೆಯ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

ಮಾಗಳ-ಕಲ್ಲಾಗನೂರು ಸೇತುವೆ ಜನರಿಗೆ ಅಗತ್ಯವಿದೆ. ಸರ್ಕಾರ ಅನುದಾನದ ಕೊರತೆ ನೆಪ ಹೇಳದೇ ಬೇರೆ ಅನುದಾನ ಕೊಟ್ಟು ಕೂಡಲೇ ಸೇತುವೆ ನಿರ್ಮಾಣದ ಕಾರ್ಯ ಆರಂಭಿಸಬೇಕು, ವಿಳಂಬವಾದರೇ ಮತ್ತೆ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ತಿಳಿಸಿದ್ದಾರೆ.

ಮಾಗಳ-ಕಲ್ಲಾಗನೂರು ಸೇತುವೆ ನಿರ್ಮಾಣ ಕುರಿತು ಕ್ರಿಯಾ ಯೋಜನೆಯು ₹37.50 ಕೋಟಿಗಳಿಗೆ ಸಿದ್ಧಪಡಿಸಿ ಕರ್ನಾಟಕ ನೀರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ ಎಂದು ಮುಂಡರಗಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಇಇ ಐಗೋಳ್‌ ಪ್ರಕಾಶ ತಿಳಿಸಿದ್ದಾರೆ.