ನಗರಸಭೆಯಲ್ಲಿ ಮಂಜೂರಾದ 40 ಹುದ್ದೆಗಳಲ್ಲಿ 37 ಖಾಲಿ!

| Published : Oct 04 2024, 01:06 AM IST

ಸಾರಾಂಶ

ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸ್ಥಳೀಯ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ನಗರಸಭೆ ನಿತ್ಯ ಸಾರ್ವಜನಿಕ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಒಂದಲ್ಲ, ಎರಡಲ್ಲ, ಮೂರಲ್ಲ, ಮಂಜೂರಾದ 40 ಹುದ್ದೆಗಳಿಗೆ ಸ್ಥಳೀಯ ನಗರಸಭೆಯಲ್ಲಿ ಭರ್ತಿಯಾಗದೇ ಖಾಲಿ ಇರುವ ಹುದ್ದೆಗಳ ಸಂಖ್ಯೆಯೇ ಬರೋಬ್ಬರಿ 37.

ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸ್ಥಳೀಯ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ನಗರಸಭೆ ನಿತ್ಯ ಸಾರ್ವಜನಿಕ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದೆ.

ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೇಗೇರಿರುವ ಶಿಡ್ಲಘಟ್ಟ ನಗರಸಭೆ ಅಧಿಕಾರಿ, ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದೆ ಕುಂಠಿತಗೊಳ್ಳುತ್ತಿದ್ದು, ಇದಕ್ಕೆ ನಗರಸಭೆಯಲ್ಲಿ ಪ್ರಮುಖ ಅಧಿಕಾರಿ, ಸಿಬ್ಬಂದಿ ಹುದ್ದೆಗಳು ಭರ್ತಿಯಾಗದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ನಗರಸಭೆಯಲ್ಲಿ ಪೌರಾಯುಕ್ತರ ಹುದ್ದೆ ಹೊರತುಪಡಿಸಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೆಕ್ಕ ಅಧೀಕ್ಷಕರು, ಕಂದಾಯ ಅಧಿಕಾರಿ, ಲೆಕ್ಕಿಗರು, ಹಿರಿಯ ಕಿರಿಯ ಆರೋಗ್ಯ ಸಹಾಯಕರು, ನೀರು ಸರಬರಾಜುದಾರರು, ಕರ ವಸೂಲಿಗಾರರು ಸೇರಿ ಒಟ್ಟು 40 ಹುದ್ದೆಗಳು ಮಂಜೂರಾದರೂ ಸದ್ಯ ನಗರಸಭೆಯಲ್ಲಿ ಭರ್ತಿ ಯಾಗದೆ ಖಾಲಿ ಇರುವ 37 ಹುದ್ದೆಗಳಿದ್ದು ಕೇವಲ 3 ಮಂದಿ ಮಾತ್ರ ಕಾಯಂ ನೌಕರರು ಇಡೀ ನಗರಸಭೆ ಕಾರ್ಯಗಳನ್ನು ನೋಡಿಕೊಳ್ಳಬೇಕಿದೆ. ಸದ್ಯ ನಗರಸಭೆ ತನ್ನ ಕೆಲಸ ಕಾರ್ಯಗಳನ್ನು ಹೊರ ಗುತ್ತಿಗೆ ಸಿಬ್ಬಂದಿ ಆಧಾರದ ಮೇಲೆ ಅವಲಂಬಿಸಿದೆ. ಸಮರ್ಪಕವಾಗಿ ತೆರಿಗೆ ವಸೂಲಿಯಿಂದ ಹಿಡಿದು ಸ್ವಚ್ಛತೆ, ನೈರ್ಮಲ್ಯ ಕಾಪಾಡುವಲ್ಲಿ ನಗರಸಭೆ ಹಿಂದುಳಿದಿದೆ. ಇಂದಿಗೂ ನಗರಕ್ಕೆ ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆ ಆಗಿಲ್ಲ. ನಗರಸಭೆ ಹೊಸ ಕಟ್ಟಡ ಕೂಡ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಇಡೀ ನಗರಸಭೆ ಅಧಿಕಾರಿ, ಸಿಬ್ಬಂದಿ ಕೊರತೆ ಸಾರ್ವಜನಿಕರ ಸೇವೆಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗದೆ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದೆ.

ಒಟ್ಟಿನಲ್ಲಿ ರೇಷ್ಮೆ ನಗರವಾಗಿ ಇಡೀ ರಾಜ್ಯಕ್ಕೆ ಶಿಡ್ಲಘಟ್ಟ ಪ್ರಖ್ಯಾತಿ ಹೊಂದಿದ್ದರೂ ನಗರಸಭೆ ಸಿಬ್ಬಂದಿ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೇ ನಗರಸಭೆ ವ್ಯಾಪ್ತಿಯಲ್ಲಿ ಕರ ವಸೂಲಿಯಿಂದ ಹಿಡಿದು ಕುಡಿಯುವ ನೀರು ಪೂರೈಕೆ, ಕಸ ವಿಲೇವಾರಿ ಸೇರಿ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಲ್ಲಿ ಹಿಂದೆ ಬಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

40 ಮಂದಿ ಪೌರ ಕಾರ್ಮಿಕರ ಕೊರತೆ:

ಇನ್ನೂ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ ಸ್ವಚ್ಛತೆ, ನೈರ್ಮಲ್ಯ ಕಾಪಾಡಲು ಬರೋಬ್ಬರಿ 100 ಮಂದಿ ಪೌರ ಕಾರ್ಮಿಕರು ಇರಬೇಕು. ಆದರೆ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಮಾತ್ರ 60 ಮಂದಿ. ಇನ್ನೂ 40 ಮಂದಿ ಪೌರ ಕಾರ್ಮಿಕರ ಕೊರತೆಯಿಂದ ನಗರಸಭೆಗೆ ನಗರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಸ್ವಚ್ಛತೆ, ನೈರ್ಮಲ್ಯ, ಘನ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ.