ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
371ಜೆ ಪ್ರಮಾಣ ಪತ್ರವನ್ನು ಕಾಲೇಜುಗಳ ಮೂಲಕವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇರುವಂತಹ ವಿದ್ಯಾರ್ಥಿಗಳಲ್ಲಿ 371ಜೆ ಪ್ರಮಾಣ ಪತ್ರ ಪಡೆದುಕೊಳ್ಳಲು ದಾಖಲಾತಿಗಳ ಬಗ್ಗೆ ಅನೇಕ ಗೊಂದಲಗಳು ಸೃಷ್ಟಿಯಾದ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಕಾಲೇಜಿಗೆ ಭೇಟಿ ನೀಡಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಿ 371ಜೆ ಪ್ರಮಾಣ ಪತ್ರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 1ರಿಂದ 10ನೇ ತರಗತಿಯ ವ್ಯಾಸಂಗ ಮಾಡಿರಬೇಕು. ಮೂಲ ದಾಖಲಾತಿಗಳನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಒಟ್ಟು ನಾಲ್ಕು ವಿಧಗಳಲ್ಲಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಸದುದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು ಇದು ಕಲ್ಯಾಣ ಕರ್ನಾಟಕದ ಎಲ್ಲ ತಾಲೂಕುಗಳಿಗೆ ವಿಸ್ತರಣೆಯಾಗಲಿದೆ ಎಂದರು.2013ರಲ್ಲಿ ಜಾರಿಗೆ ಬಂದ ಕಾಯ್ದೆಯ ಅನ್ವಯವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಡ್ಡಾಯವಾಗಿ ಶೈಕ್ಷಣಿಕ ಅಭ್ಯಾಸ ಮಾಡಿರಬೇಕು ಬಿಇಒ ಅವರಿಂದ ದೃಢೀಕೃತವಾಗಿರಬೇಕು ಹಾಗೂ ವಾಸಸ್ಥಳದ ದಾಖಲೆಗಳು ಅವಶ್ಯಕವಾಗಿ ಬೇಕಾಗಿದ್ದು, ಈ ಎಲ್ಲ ದಾಖಲಾತಿಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ ದಾಖಲಾತಿ ಸಮರ್ಪಕವಾಗಿ ಇರುವ ಅರ್ಜಿ ಹಾಕಲಾಗುತ್ತದೆ. ಒಂದು ತಿಂಗಳ ಒಳಗಾಗಿ 371ಜೆ ಪ್ರಮಾಣ ಪತ್ರವೂ ವಿದ್ಯಾರ್ಥಿಗಳ ಕೈ ಸೇರಲಿದೆ ಎಂದರು.
ಒಂದು ವೇಳೆ ಅನರ್ಹರು 371ಜೆ ಸೌಲಭ್ಯ ತೆಗೆದುಕೊಂಡಿರುವುದು ಕಂಡು ಬಂದರೆ ಅಥವಾ ಅಂತಹವರ ಮಾಹಿತಿ ನೀಡಿದರೆ ಸಾಕು ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಸೇರಿದಂತೆ ಹಲವರು ಇದ್ದರು.