ಸಾರಾಂಶ
ಶಿವಮೊಗ್ಗ: ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿಟ್ಟಿದ್ದ ₹38 ಸಾವಿರ ಕೋಟಿಯನ್ನು ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಕೂಡಲೇ ಇದನ್ನು ನಿಲ್ಲಿಸಿ, ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪ ಹೇಳಿದರು.
ನಗರದ ಪ್ರೆಸ್ ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಸುಮಾರು ವರ್ಷಗಳ ಕಾಲ ಭರ್ತಿ ಮಾಡಿಲ್ಲ. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಸರ್ಕಾರವು ಶೀಘ್ರ ಎಚ್ಚೆತ್ತು ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಲವು ಇಲಾಖೆಗಳಲ್ಲಿ ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರ ನೇಮಕಾತಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ನೀಡುವಾಗ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ವಿಶೇಷ ಆದ್ಯತೆ ನೀಡಿ ಶೇ.24ರಂದು ಅನುಪಾತದಲ್ಲಿ ಭೂ ಮಂಜೂರಾತಿ ಮಾಡಲು ಸರ್ಕಾರವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಇದುವರೆಗೂ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಕಾಂತರಾಜ ವರದಿ ಜಾರಿ ವಿಳಂಬ ಸಲ್ಲದು. ಕೆಲವರ ಒತ್ತಡದ ಹಿನ್ನೆಲೆಯಲ್ಲಿ ವರದಿ ಅದು ಜಾರಿ ಆಗಿಲ್ಲ. ಆದರೆ, ಬಹುಜನರಿಗೆ ಉಪಯೋಗ ಆಗುವ ಈ ಸಮೀಕ್ಷೆ ಕೂಡಲೇ ಜಾರಿಯಾಗಬೇಕು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಭರ್ಮಪ್ಪ ಅಂದಾಸುರ, ಜಿಲ್ಲಾ ಸಂಘಟನಾ ಸಂಚಾಲಕ ಡಿ.ಕೆ.ರಮೇಶ್, ಪರಶುರಾಮ, ಸದಾಶಿವ, ಮಹಿಳಾ ವಿಭಾಗದ ಅಧ್ಯಕ್ಷೆ ಸುನೀತಾ ರಾಜ್ ಹಾಗೂ ಸಾಗರ ತಾಲೂಕು ಸಂಚಾಲಕ ಹೊಸಕೊಪ್ಪ ರೇವಪ್ಪ ಮತ್ತಿತರರು ಇದ್ದರು.
- - - -17ಎಸ್‌ಎಂಜಿಕೆಪಿ01:ಶಿವಮೊಗ್ಗದ ಪ್ರೆಸ್ ಟ್ರಸ್ಟ್‌ನಲ್ಲಿ ಬುಧವಾರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.