ಸಾರಾಂಶ
- 16 ಪರೀಕ್ಷಾ ಕೇಂದ್ರಗಳ ಸ್ಥಾಪನೆ । ಒಟ್ಟು 85 ಪ್ರೌಢಶಾಲೆಗಳು । 1812 ಬಾಲಕರು, 2004 ಬಾಲಕಿಯರು: ಬಿಇಒ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ 10ನೇ ತರಗತಿ ಪರೀಕ್ಷೆ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಭಾರಿ ಸಿದ್ಧತೆಗಳನ್ನು ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸುಗಮವಾಗುವಂತೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ 16 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ 3816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ತಾಲೂಕಿನಲ್ಲಿ 28 ಸರ್ಕಾರಿ ಪ್ರೌಢಶಾಲೆಗಳಿದ್ದರೆ ಸರ್ಕಾರಿ ಅನುದಾನಿತ 35 ಶಾಲೆಗಳು ಅನುದಾನ ರಹಿತ 15 ಶಾಲೆಗಳು, ವಸತಿಯುತ 7 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 85 ಪ್ರೌಢಶಾಲೆಗಳಿಂದ 1812 ಜನ ಬಾಲಕರು, 2004 ಬಾಲಕಿಯರು ಸೇರಿದಂತೆ ಒಟ್ಟು 3816 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸಲಿದ್ದಾರೆ ಎಂದಿದ್ದಾರೆ.
ಎಲ್ಲೆಲ್ಲಿ ಕೇಂದ್ರಗಳ ಸ್ಥಾಪನೆ?:ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿರುವ ತಾಲೂಕಿನ ವಿವಿಧ ಗ್ರಾಮಗಳೆಂದರೆ ಗೊಪ್ಪೇನಹಳ್ಳಿ, ತಾವರೆಕೆರೆ, ದೇವರಹಳ್ಳಿ, ಸಂತೆಬೆನ್ನೂರು, ನಲ್ಲೂರು, ಕೆರೆಬಿಳಚಿ, ಬಸವಾಪಟ್ಟಣ, ತ್ಯಾವಣಿಗೆ, ಹಿರೇಕೋಗಲೂರು, ಕಾರಿಗನೂರು, ಹೊದಿಗೆರೆ, ಮಾವಿನಕಟ್ಟೆ, ಕೆಂಗಾಪುರ ಈ ಪ್ರದೇಶಗಳಲ್ಲಿ ತಲಾ ಒಂದೊಂದರಂತೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದರೆ, ಚನ್ನಗಿರಿ ಪಟ್ಟಣದಲ್ಲಿ ಮೂರು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆಯು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಎಲ್ಲ ಕೊಠಡಿಗಳಿಗೂ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ನಕಲು ಮಾಡದಂತೆ ಬಿಗಿ ಭದ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.
- - - (ಬಾಕ್ಸ್) * 625 ಅಂಕ ಪಡೆದರೆ ₹1 ಲಕ್ಷ ಬಹುಮಾನ ಚನ್ನಗಿರಿ ತಾಲೂಕಿನಲ್ಲಿರುವ 85 ಪ್ರೌಢಶಾಲೆಗಳಿಂದ 3816 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಪರೀಕ್ಷೆಯಲ್ಲಿ 625 ಅಂಕಕ್ಕೆ 625 ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ₹1 ಲಕ್ಷ ಬಹುಮಾನ ನೀಡುವುದಾಗಿ ಕ್ಷೇತ್ರದ ಶಾಸಕ ಬಸವರಾಜ ವಿ. ಶಿವಗಂಗಾ ಘೋಷಿಸಿದ್ದಾರೆ. ಅಲ್ಲದೇ, ಶೇ.100ಕ್ಕೆ 100ರಷ್ಟು ಫಲಿತಾಂಶ ಪಡೆಯುವ ಶಾಲೆಗಳವರಿಗೆ ಗೌರವಿಸಲಾಗುವುದು ಎಂದು ಕನ್ನಡಪ್ರಭಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.ಈ ಬಗ್ಗೆ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪರೀಕ್ಷೆಗೆ ತಯಾರು ಮಾಡಬೇಕು ಎಂದು ತಿಳಿಸಲಾಗಿದೆ. ತಾಲೂಕಿನ ಕೆಲವು ಪ್ರೌಢಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ 35 ಶಾಲೆಗಳಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 9.30 ರವರೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ರಾಕ್ಟಿಸ್ ಎಂಬ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೇ ಚನ್ನಗಿರಿ ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿ ಇರಬೇಕೆಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆ ಎನ್ನುವುದು ಒಂದು ಹಬ್ಬ ಎಂಬಂತೆ ಭಾವಿಸಬೇಕು. ಪರೀಕ್ಷೆ ಭಯವಿಲ್ಲದಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ ಎಂದರು.
- - - -3ಕೆಸಿಎನ್‌ಜಿ1.ಜೆಪಿಜಿ:ದುರವಿಗೆರೆ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಹಿನ್ನೆಲೆ ರಾತ್ರಿವೇಳೆ ನಡೆಸುತ್ತಿರುವ ಪಾಸಿಂಗ್ ಪ್ರಾಕ್ಟಿಸ್ ತರಗತಿಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.