ಸಾರಾಂಶ
ಶಾಸಕನಾಗಿ ಎರಡು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಕ್ಷೇತ್ರದಲ್ಲಿ ₹೩೮೨ ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.
ಶಿರಸಿ; ಇಲ್ಲಿನ ಶಾಸಕನಾಗಿ ಎರಡು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಕ್ಷೇತ್ರದಲ್ಲಿ ₹೩೮೨ ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ಶುಕ್ರವಾರ ನಗರದ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಾಸಕನಾಗಿ ಆಯ್ಕೆಯಾದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದ ಸಹಕಾರದಿಂದ ಉತ್ತಮವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಅದನ್ನು ಸರಿಪಡಿಸುವ ಕೆಲಸ ಮಾಡಲಾಗಿದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಿವಿಧ ಇಲಾಖೆಗಳ ಅಡಿಯಲ್ಲಿ ಗ್ರಾಮೀಣ, ನಗರ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ೨೦೨೩-೨೪ ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ₹೨೨೧ ಕೋಟಿ ಹಾಗೂ ೨೦೨೪-೨೫ ನೇ ಸಾಲಿನಲ್ಲಿ ₹೧೬೧ ಕೋಟಿ ಅನುದಾನ ತರಲಾಗಿದೆ ಎಂದರು.ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಕಸ್ತೂರಿ ರಂಗನ್ ವರದಿ ಹೀಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದಿಂದ ಅಗತ್ಯ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಲಾಗಿದೆ. ಅಲ್ಲಿ ಸ್ಥಳೀಯ ಸಂಸದರು ಪ್ರಯತ್ನ ನಡೆಸಿ ಜನಪರ ಆದೇಶ ಬರುವಂತೆ ಮಾಡಬೇಕಿದೆ ಎಂದರು.
೨೦೨೩-೨೪ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ೪೦ ಕೋಟಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ೨೦ ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿ ೧೪.೫೦ ಕೋಟಿ, ನಗರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಾಗಾರಿ (ಎಸ್.ಎಫ್.ಸಿ) ₹೩.೫ ಕೋಟಿ, ಅಲ್ಪಸಂಖ್ಯಾತ ಕಾಲನಿಗಳ ಅಭಿವೃದ್ಧಿ ಕಾಮಗಾರಿ ₹೫ ಕೋಟಿ, ಸಣ್ಣ ನೀರಾವರಿ ಇಲಾಖೆಯ ಕೆರೆ ಅಭಿವೃದ್ಧಿ ಹಾಗೂ ಸೇತುವೆ ಸಹಿತ ಬಾಂದಾರ ನಿರ್ಮಾಣ ₹೪.೭೫ ಕೋಟಿ, ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ. ಯೋಜನೆ (ರಸ್ತೆ) ₹೧.೭೫ ಕೋಟಿ, ಮಳೆ ಪರಿಹಾರ ಯೋಜನೆ ಅಡಿ ರಸ್ತೆ ಕಾಮಗಾರಿ ₹೧ ಕೋಟಿ, ಸಮುದಾಯ ಭವನ ನಿರ್ಮಾಣ ಕಾಮಗಾರಿ ₹೫.೫೦ ಕೋಟಿ, ಮುಜರಾಯಿ ಇಲಾಖೆಯ ದೇವಸ್ಥಾನಗಳ ಅಭಿವೃದ್ಧಿ ₹೧.೫೦ ಕೋಟಿ, ಎಪಿಎಂಸಿ ಶಿರಸಿ ಅಭಿವೃದ್ಧಿ ಕಾಮಗಾರಿ ₹೨.೫ ಕೋಟಿ, ನಗರಸಭೆ ಶಿರಸಿ ಕುಡಿಯುವ ನೀರಿಗಾಗಿ ₹೬೫ ಕೋಟಿ, ಸಿದ್ದಾಪುರ ತಾಲೂಕು ಮಳಲವಳ್ಳಿ ಕೈಗಾರಿಕೆ ವಸಾಹತು ಯೋಜನೆ ₹೩೦ ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು. ೨೦೨೪-೨೫ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ₹೧೫ ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿ (೫೦೫೪) ₹೧೦ ಕೋಟಿ, ಲೋಕೋಪಯೋಗಿ ಇಲಾಖೆಯ ಕಾಲು ಸಂಕ ₹೧.೪೬ ಕೋಟಿ, ಎಸ್.ಸಿ.ಪಿ.- ಟಿ.ಎಸ್.ಪಿ. ಯೋಜನೆ ₹೧ ಕೋಟಿ, ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಹೆಚ್ಚುವರಿ ₹೫ ಕೋಟಿ ಮಂಜೂರಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ದೀಪಕ ಹೆಗಡೆ ದೊಡ್ಡುರು, ಎಸ್.ಕೆ.ಭಾಗ್ವತ್, ಗೀತಾ ಶೆಟ್ಟಿ, ಪ್ರವೀಣ ಗೌಡ, ಜ್ಯೋತಿ ಗೌಡ ಮತ್ತಿತರರು ಇದ್ದರು.