ಹಳಿಯಾಳ: ಚಿಕ್ಕ ನೀರಾವರಿ ಇಲಾಖೆ ಹಳಿಯಾಳ ವಿಭಾಗದಲ್ಲಿ ಕಳೆದ ಹಲವು ದಶಕಗಳಿಂದ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ₹385 ಕೋಟಿ ಬಿಲ್ ಬಾಕಿ ಉಳಿದಿದ್ದು, ಈ ಬಾಕಿ ಬಿಲ್ಲನ್ನು ಬೇಗನೆ ಪಾವತಿಸಬೇಕೆಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಚಿಕ್ಕ ನೀರಾವರಿ ಇಲಾಖೆಯ ಗುತ್ತಿಗೆದಾರರು ಹಳಿಯಾಳದಲ್ಲಿ ಚಿಕ್ಕ ನೀರಾವರಿ ಇಲಾಖೆಯ ವಿಭಾಗೀಯ ಕಚೇರಿಯ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಚಿಕ್ಕ ನೀರಾವರಿ ಇಲಾಖೆಯ ಹಳಿಯಾಳದಲ್ಲಿ ₹380 ಕೋಟಿಗಿಂತಲೂ ಬಾಕಿ ಉಳಿದಿದ್ದು, ಬಂದ ಎಲ್.ಒ.ಸಿ.ಯಲ್ಲಿ ಹಂಚುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲಾ ಚಿಕ್ಕ ನೀರಾವರಿ ಇಲಾಖೆಯ ಗುತ್ತಿಗೆದಾರರ ಸಂಘ ಗುರುವಾರ "ಹಳಿಯಾಳ ಚಲೋ " ಕರೆ ನೀಡಿತ್ತು. ಈ ಕರೆ ಬೆಂಬಲಿಸಿ ಜಿಲ್ಲೆಯ ವಿವಿಧ ತಾಲೂಕಗಳಿಂದ ಆಗಮಿಸಿದ ಗುತ್ತಿಗೆದಾರರು ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.ಧರಣಿ ಆರಂಭಗೊಳ್ಳುತ್ತಿದ್ದಂತೆ ಪ್ರಭಾರೆ ಕಾರ್ಯನಿರ್ವಾಹಕ ಅಭಿಯಂತರರು ವಾಹನದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದರು. ಅದನ್ನು ಕಂಡು ಗುತ್ತಿಗೆದಾರರು ವಾಹನ ಅಡ್ಡಗಟ್ಟಿ ಧರಣಿ ಮುಂದುವರಿಸಿದರು. ಪ್ರಭಾರೆ ಕಾರ್ಯನಿರ್ವಾಹಕ ಅಭಿಯಂತರರು ವಾಹನವನ್ನು ಮತ್ತೆ ಕಚೇರಿಗೆ ತಂದು ನಿಲ್ಲಿಸಿ, ಕಚೇರಿಯಲ್ಲಿ ಕುಳಿತರು. ತದನಂತರ ಪ್ರತಿಭಟನಾನಿರತ ಗುತ್ತಿಗೆದಾರರು ಕಚೇರಿಗೆ ತೆರಳಿ ತಮ್ಮ ದೂರು-ದುಮ್ಮಾನಗಳನ್ನು ತೋಡಿಕೊಂಡರು. ಹಳಿಯಾಳ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಮುಖಾಂತರ ಚಿಕ್ಕ ನೀರಾವರಿ ಇಲಾಖೆ ಸಚಿವರು ಹಾಗೂ ಇಲಾಖೆಯ ಕಾರ್ಯದರ್ಶಿಗೆ ಮನವಿ ರವಾನಿಸಿದರು.
₹385 ಕೋಟಿ ಬಾಕಿಯಿದೆ:ಹಳಿಯಾಳದಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿ ಮೊತ್ತ ₹385 ಕೋಟಿ ಬಾಕಿ ಉಳಿದಿದೆ. ಬ್ಯಾಂಕಿನಿಂದ ಸಾಲ ಮಾಡಿ, ಮತ್ತೆ ಕೆಲವರು ಬಂಗಾರವನ್ನು ಬ್ಯಾಂಕಿನಲ್ಲಿ ಅಡ ಇಟ್ಟು ಕೆಲಸ ಮಾಡಿಸಿದ್ದೇವೆ. ಇದರಿಂದಾಗಿ ಸಾಲದ ಮೊತ್ತ ಹಾಗೆಯೇ ಇದ್ದು, ಅದರ ಬಡ್ಡಿ ಮೊತ್ತವನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಕೆಲಸ ಮಾಡಲು ಪಡೆದುಕೊಂಡ ಜಲ್ಲಿ, ಸ್ಟೀಲ್, ಉಸುಕು, ಇತರ ಪೂರೈಕೆದಾರರಿಗೂ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಭ್ರಷ್ಟಾಚಾರ ತಾಂಡವ: ಇತ್ತೀಚಿನ ದಿನಗಳಲ್ಲಿ ಬಿಲ್ಲುಗಳನ್ನು ಪಡೆಯುವುದು ದುಸ್ಸಾಹಸವಾಗುತ್ತಿದೆ. ಹಳಿಯಾಳಕ್ಕೆ ಅತಿ ಕಡಿಮೆ ಎಲ್ಒಸಿ ಬರುತ್ತಿದ್ದು, ಅವುಗಳಲ್ಲಿ ಶೇ. 95ರಷ್ಟು ಪ್ರಭಾವಿ ಗುತ್ತಿಗೆದಾರರ ಹೆಸರಿಗಷ್ಟೇ ಬರುತ್ತದೆ. ಕೆಲವು ಗುತ್ತಿಗೆದಾರರು ಬೆಂಗಳೂರಿಗೆ ಭೇಟಿಯಾಗಲು ಹೋದರೆ ಅಧಿಕಾರಿಗಳು, ರಾಜಕಾರಣಿಗಳು ನಮ್ಮ ಕೈಗೆ ಸಿಗುವುದಿಲ್ಲ. ಅಲ್ಲದೇ ಗುತ್ತಿಗೆದಾರರನ್ನು ಒಳಗೆ ಬಿಡಬೇಡಿ ಎಂದು ನೇರವಾಗಿ ಹೇಳುತ್ತಿದ್ದಾರೆ. ನಾವು ಭಿಕ್ಷುಕರಿಗಿಂತ ಕಡೆಯಾಗಿ ಹೋಗಿದ್ದೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆತ್ಮಹತ್ಯೆ ಪರಿಸ್ಥಿತಿ: ವ್ಯವಸ್ಥೆಯಿಂದ ಮನನೊಂದು ನಾವು ಈ ದಿನ "ಹಳಿಯಾಳ ಚಲೋ " ಹಮ್ಮಿಕೊಂಡಿದ್ದೇವೆ. ಉತ್ತರ ಕನ್ನಡದ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕೇವಲ ಧಾರವಾಡದ ಗುತ್ತಿಗೆದಾರರಿಗೆ ಪ್ರಾಧಾನ್ಯ ನೀಡಲಾಗುತ್ತಿದೆ. ಇಂತಹ ವ್ಯವಸ್ಥೆ ಕೊನೆಗೊಳ್ಳಲು ಹೋರಾಟ ಅನಿವಾರ್ಯವಾಗಿದೆ. ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಗುತ್ತಿಗೆದಾರರ ಬೇಡಿಕೆಗಳಿಗೆ ಸ್ಪಂದಿಸಬೇಕು, ಎಲ್ಒಸಿ ವಿತರಣೆಯಲ್ಲಿ ಸುಧಾರಣಾ ಕ್ರಮ ತರಬೇಕು ಹಾಗೂ ಬಾಕಿ ಇರುವ ಎಲ್ಲ ಬಿಲ್ಗಳನ್ನು ಬಟವಾಡೆ ಮಾಡಲು ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ಪ್ರಮುಖರಾದ ಪ್ರಶಾಂತ ನಾಯ್ಕ, ಸತೀಶ ಗೌಡ, ಮಾಧವ ನಾಯ್ಕ, ಕೃಷ್ಣ ನಾಯ್ಕ, ರಾಘವೇಂದ್ರ ನಾಯ್ಕ, ನಾಗೇಶ ನಾಯ್ಕ, ಸುಧೀರ ಪಂಡಿತ, ರಿಚರ್ಡ್, ಪ್ರಶಾಂತ ಕೆ. ನಾಯ್ಕ, ದಾಮೋದರ ನಾಯ್ಕ, ಹಳಿಯಾಳದ ಕಿರಣಕುಮಾರ ಶೆಟವಣ್ಣನವರ, ಸಂಜು ಮೊರೆ, ಎ.ಎ. ಮನಿಯಾರ ಇದ್ದರು.