ಮಂಡ್ಯ ಜಿಲ್ಲೆಯಲ್ಲಿ ಟಿಇಟಿ ಪರೀಕ್ಷೆಗೆ ೩೮೯೨ ವಿದ್ಯಾರ್ಥಿಗಳು ನೋಂದಣಿ: ಡಾ.ರೋಹಿಣಿ

| Published : Jun 27 2024, 01:12 AM IST

ಮಂಡ್ಯ ಜಿಲ್ಲೆಯಲ್ಲಿ ಟಿಇಟಿ ಪರೀಕ್ಷೆಗೆ ೩೮೯೨ ವಿದ್ಯಾರ್ಥಿಗಳು ನೋಂದಣಿ: ಡಾ.ರೋಹಿಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಜೂ.೩೦ ರಂದು ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ ೨ ರಿಂದ ಸಂಜೆ ೪.೩೦ ರವರೆಗೆ ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದ್ದು ೧೧ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಪತ್ರಿಕೆ ೧ಕ್ಕೆ ೧೩೪೬ ಅಭ್ಯರ್ಥಿಗಳು ಮತ್ತು ಪತ್ರಿಕೆ-೨ಕ್ಕೆ ೨೫೪೬ ಅಭ್ಯರ್ಥಿಗಳು ಒಟ್ಟು ೩೮೯೨ ಅಭ್ಯರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯಲ್ಲಿ ೩೮೯೨ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ ಹೇಳಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪರೀಕ್ಷೆಯು ಜೂ.೩೦ ರಂದು ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ ೨ ರಿಂದ ಸಂಜೆ ೪.೩೦ ರವರೆಗೆ ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದ್ದು ೧೧ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಪತ್ರಿಕೆ ೧ಕ್ಕೆ ೧೩೪೬ ಅಭ್ಯರ್ಥಿಗಳು ಮತ್ತು ಪತ್ರಿಕೆ-೨ಕ್ಕೆ ೨೫೪೬ ಅಭ್ಯರ್ಥಿಗಳು ಒಟ್ಟು ೩೮೯೨ ಅಭ್ಯರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ ಎಂದರು.

ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀ. ಸುತ್ತಳತೆಯಲ್ಲಿ ೧೪೪ನೇ ಕಲಂ ಜಾರಿಗೊಳಿಸಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಸೂಚನೆ ನೀಡಿದರು.

ಪರೀಕ್ಷೆ ಪ್ರಾರಂಭವಾಗುವ ಮೊದಲು ಒಂದು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು ಕಡ್ಡಾಯವಾಗಿ ಪ್ರವೇಶ ಪತ್ರವನ್ನು ಹಾಗೂ ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿಯೊಂದಿಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ತರಬೇಕು. ಪರೀಕ್ಷಾರ್ಥಿಗಳು ಒಂದು ಸಲ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಿದ ನಂತರ ಎರಡು ಪತ್ರಿಕೆಗಳ ಪರೀಕ್ಷೆ ಮುಗಿದ ನಂತರ ಮಾತ್ರವೇ ಹೊರಗೆ ಹೋಗಲು ಅವಕಾಶವಿರುತ್ತದೆ ಎಂದು ನುಡಿದರು.

ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ವೈಟ್ ಫ್ಲೂಯಿಡ್, ವೈರ್‌ಲೆಸ್‌ಸೆಟ್, ಕ್ಯಾಲ್ಕುಲೇಟರ್ ಇತ್ಯಾದಿ ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ದಿನವು ಭಾನುವಾರವಾಗಿರುವುದರಿಂದ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಳ್ಳುವ ಮತ್ತು ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಖಜಾನೆಯಲ್ಲಿ ಸಂರಕ್ಷಿಸಿಡುವ ಸಂದರ್ಭಗಳಲ್ಲಿ ಖಜಾನಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿರುವಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ವೈದ್ಯರು, ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವುದು, ಕೇಂದ್ರಗಳ ಸುತ್ತಮುತ್ತ ಸ್ವಚ್ಛತೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯ, ಸೂಕ್ತ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.