ಸಾರಾಂಶ
ಬ್ಯಾಡಗಿ ತಾಲೂಕಿನ ಆಣೂರು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಬ್ಯಾಡಗಿವಿಷಾಹಾರ ಸೇವಿಸಿದ (ಫುಡ್ ಪಾಯಿಸನ್) ತಾಲೂಕಿನ ಆಣೂರು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ (ದೇವರಾಜ ಅರಸು ವಸತಿ ನಿಲಯ) ಒಟ್ಟು 39 ವಿದ್ಯಾರ್ಥಿನಿಯರು ವಾಂತಿಭೇದಿಯಿಂದ ಅಸ್ವಸ್ಥರಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ನಡೆದಿದೆ.
ಮಂಗಳವಾರ ರಾತ್ರಿ ಊಟದ ಬಳಿಕ ಒಬ್ಬೊಬ್ಬರಿಗೆ ವಾಂತಿ ಭೇಧಿ ಆರಂಭವಾಗಿದ್ದು, ನಿತ್ರಾಣಗೊಂಡಿದ್ದ ಅವರನ್ನು ಹಾಸ್ಟೆಲ್ ಸಿಬ್ಬಂದಿ ಹಾಗೂ ಶಾಲೆಯ ಸಿಬ್ಬಂದಿ ಬ್ಯಾಡಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಬಂದು ಹಾಸ್ಟೆಲ್‌ನಲ್ಲಿ ನೆಲೆಸಿರುವ 39 ವಿದ್ಯಾರ್ಥಿನಿಯರಲ್ಲಿ ಓರ್ವ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಮಂಗಳವಾರ ರಾತ್ರಿಯೇ ವಸತಿ ಶಾಲೆಯಲ್ಲಿನ 12 ವಿದ್ಯಾರ್ಥಿನಿಯರಿಗೆ ವಾಂತಿಭೇದಿ ಶುರುವಾಗಿದೆ. ಅವರನ್ನ ಬ್ಯಾಡಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬೆಳಗ್ಗೆ ಮತ್ತೆ ಉಳಿದ ಮಕ್ಕಳಿಗೂ ಸಹ ವಾಂತಿಭೇದಿ ಶುರುವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.
ಮಕ್ಕಳು ಅಸ್ವಸ್ಥರಾಗಿರುವ ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಬಸವರಾಜ ಶಿವಣ್ಣನವರ ಪ್ರತಿಯೊಬ್ಬ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ವಸತಿ ಶಾಲೆಯಲ್ಲಿ ಹಾಗೂ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಪೋಷಕರು ಹಾಗೂ ಗ್ರಾಮದ ನಿವಾಸಿಗಳು ಹಲವು ಬಾರಿ ಅಡುಗೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದರೆ ನಿರ್ಲಕ್ಷ್ಯ ಮನೋಭಾವದಿಂದ ಈ ಘಟನೆ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.ಮಕ್ಕಳು ಸೇವಿಸಿದ ನೀರು ಹಾಗೂ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಚಿಕಿತ್ಸೆಗೆ ಸ್ಪಂದಿಸಿದ್ದು, ಪೋಷಕರು ಭಯಪಡುವ ಅಗತ್ಯವಿಲ್ಲ, ಒಬ್ಬಳನ್ನು ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಪತ್ರೆ ದಾಖಲು ಮಾಡಲಾಗಿದ್ದು, ಆ ಮಗುವು ಸಹ ಗುಣಮುಖವಾಗುತ್ತಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಪುಟ್ಟರಾಜ ತಿಳಿಸಿದ್ದಾರೆ.