ತುಂಗಭದ್ರಾ ಜಲಾಶಯದಲ್ಲಿ 39 ಟಿಎಂಸಿ ನೀರು ಸಂಗ್ರಹ

| Published : Jul 18 2024, 01:37 AM IST

ಸಾರಾಂಶ

ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಒಳ ಹರಿವು ಭಾರಿ ಏರಿಕೆಯಾಗಿದ್ದು, ಜಲಾಶಯದಲ್ಲಿ 39.718 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಒಳಹರಿವು 63 ಸಾವಿರ ಕ್ಯುಸೆಕ್ ಇದೆ.

ಹೊಸಪೇಟೆ: ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಒಳ ಹರಿವು ಭಾರಿ ಏರಿಕೆಯಾಗಿದ್ದು, ಜಲಾಶಯದಲ್ಲಿ 39.718 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಒಳಹರಿವು 63 ಸಾವಿರ ಕ್ಯುಸೆಕ್ ಇದ್ದು, ಚಿಕ್ಕಮಗಳೂರು, ತೀರ್ಥಹಳ್ಳಿ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ. ಇನ್ನೂ ಆಂಧ್ರಪ್ರದೇಶದ ಕರ್ನೂಲ, ಕಡಪ, ಅನಂತಪುರ ಮತ್ತು ತೆಲಂಗಾಣದ ಮೆಹಬೂಬನಗರ ಜಿಲ್ಲೆಗಳ 2.47 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ. ತುಂಗಭದ್ರಾ ಜಲಾಶಯದ ಒಳ ಹರಿವು ಭಾರಿ ಏರಿಕೆಯಾಗಿದ್ದು, ಈ ಬಾರಿ ಜಲಾಶಯ ಆಗಸ್ಟ್‌ ಹದಿನೈದರೊಳಗೆ ಭರ್ತಿಯಾಗುವ ಲಕ್ಷಣ ಕಂಡುಬಂದಿದೆ.

ತುಂಗಭದ್ರಾ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಈಗಾಗಲೇ ಜಲಾಶಯದಲ್ಲಿ 39.718 ಟಿಎಂಸಿ ನೀರು ಸಂಗ್ರಹವಾಗಿದೆ. ಹಾಗಾಗಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ರೈತರ ಗದ್ದೆಗಳಿಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಇದೇ ದಿನ 9.988 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ಜಲಾಶಯ ಭರ್ತಿಯಾಗಿ ಎರಡು ಬೆಳೆಗಳಿಗೆ ನೀರು ದೊರೆಯಲಿದೆ ಎಂಬ ಆಶಾಭಾವದಲ್ಲಿ ರೈತರು ಇದ್ದಾರೆ. ಈಗ ಜಲಾಶಯದಲ್ಲಿ ನೀರು ಹರಿದು ಬರುತ್ತಿರುವುದರಿಂದ ರೈತರು ಖುಷಿಯಾಗಿದ್ದಾರೆ.