ನವದೆಹಲಿ:

ಬಳ್ಳಾರಿ-ಹೊಸಪೇಟೆ ನಡುವೆ ಮೂರು ಮತ್ತು ನಾಲ್ಕನೇ ರೈಲ್ವೇ ಮಾರ್ಗ ನಿರ್ಮಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಾಸರಾ-ಮನಮಾಡ್‌, ದಿಲ್ಲಿ-ಅಂಬಾಲಾ ಸೇರಿ ಒಟ್ಟು ಮೂರು ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಲ್ಲಿ ಬಳ್ಳಾರಿ-ಹೊಸಪೇಟೆ ಕೂಡ ಸೇರಿದೆ. ಈ ಮೂರೂ ಯೋಜನೆಗಳ ಒಟ್ಟು ಯೋಜನಾ ವೆಚ್ಚ ₹18,509 ಕೋಟಿ ಆಗಿದೆ.

ಬಳ್ಳಾರಿ-ಹೊಸಪೇಟೆ ನಡುವೆ ಈಗಿರುವ ಜೋಡಿ ಮಾರ್ಗವನ್ನು ಚತುಷ್ಪಥಕ್ಕೇರಿಸುವ ನಿರ್ಧಾರದಿಂದ ಈ ಮಾರ್ಗದಲ್ಲಿ ಹೆಚ್ಚುವರಿ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲು ಕಾರ್ಯಾಚರಣೆಗೆ ಅ‍ವಕಾಶ ಮಾಡಿಕೊಟ್ಟಂತಾಗಲಿದೆ. ಈ ಯೋಜನೆಯಿಂದ ವಾರ್ಷಿಕವಾಗಿ ₹323 ಕೋಟಿ ಸರಕು ಸಾಗಣೆ ವೆಚ್ಚ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

ಬಳ್ಳಾರಿ-ಹೊಸಪೇಟೆ 3ನೇ ಮತ್ತು 4ನೇ ರೈಲ್ವೆ ಮಾರ್ಗ ಯೋಜನೆಯು ವಾಸ್ಕೋ ಡ ಗಾಮಾ-ವಿಜಯವಾಡ ನಡುವಿನ ಎಚ್‌ಯುಎನ್‌ (ಹೈಲೀ ಯುಟಿಲೈಸ್ಡ್‌ ನೆಟ್‌ವರ್ಕ್‌) ರೈಲು ಮಾರ್ಗವನ್ನು ಜೋಡಿ ಮಾರ್ಗದಿಂದ ಚತುಷ್ಪಥ ಮಾಡುವ ಯೋಜನೆಯ ಭಾಗ. ಈಗಾಗಲೇ ಇಲ್ಲಿ ಡಬಲ್‌ ಲೈನ್‌ ಇದ್ದು, ನಾಲ್ಕು ಪಥಕ್ಕೇರಿಸಿದರೆ ಆಂಧ್ರವನ್ನು ಕರ್ನಾಟಕ, ಗೋವಾ ಕರಾವಳಿಯನ್ನು ಸಂಪರ್ಕಿಸುವುದು ಸುಲಭವಾಗಲಿದೆ.


ಅನುಕೂಲ ಏನು?:

-ಪ್ರವಾಸೋದ್ಯಮಕ್ಕೆ ಉತ್ತೇಜನ:

ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಧಾಮ, ತುಂಗಭದ್ರಾ ಡ್ಯಾಂ, ಕೆಂಚನಗುಡ್ಡ ಮತ್ತು ವಿಜಯ ವಿಠ್ಠಲ ದೇಗುಲ ಮತ್ತಿತರ ದೇಗುಲಗಳಂಥ ಪ್ರಮುಖ ಪ್ರವಾಸಿ ತಾಣಗಳ ಸಂಪರ್ಕ ಸುಲಭವಾಗಲಿದೆ.

-ಸರಕು ಸಾಗಣೆ:

ಈ ಭಾಗದಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್‌, ಸ್ಟೀಲ್‌, ಸಿಮೆಂಟ್‌, ಆಹಾರಧಾನ್ಯ, ಸಕ್ಕರೆ, ಗೊಬ್ಬರದಂಥ ವಸ್ತುಗಳ ಸಾಗಣೆ ಸುಲಭವಾಗಲಿದೆ.

ಯೋಜನೆಯ ವಿವರ:

ಒಟ್ಟು 65 ಕಿ.ಮೀ. ಉದ್ದದ ಈ ರೈಲು ಮಾರ್ಗದಲ್ಲಿ 34 ಪ್ರಮುಖ ಸೇತುವೆಗಳು, 220 ಸಣ್ಣ ಸೇತುವೆಗಳ ನಿರ್ಮಾಣ ಮಾಡಬೇಕಾಗುತ್ತದೆ. ಇದರ ಜತೆಗೆ 11 ರಸ್ತೆ ಓವರ್‌ ಬ್ರಿಡ್ಜ್‌ಗಳು, 14 ರಸ್ತೆ ಅಂಡರ್‌ ಬ್ರಿಡ್ಜ್‌ಗಳ ನಿರ್ಮಾಣದ ಉದ್ದೇಶವಿದೆ. ಒಟ್ಟು ರೈಲ್ವೆ ಹಳಿಯ ಉದ್ದ 149 ಕಿ.ಮೀ. ಆಗಿರಲಿದೆ.