ಪ್ರಜ್ವಲ್‌ ವಿರುದ್ಧ 3ನೇ ರೇಪ್‌ ಕೇಸ್‌

| Published : May 13 2024, 12:07 AM IST / Updated: May 13 2024, 11:54 AM IST

Prajwal Revanna

ಸಾರಾಂಶ

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎರಡು ಅತ್ಯಾಚಾರ ಪ್ರಕರಣಗಳ ಆರೋಪಿ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಇದೀಗ ಪ್ರಜ್ವಲ್‌ ವಿರುದ್ಧ ಮೂರನೇ ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿದೆ.

 ಬೆಂಗಳೂರು :  ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎರಡು ಅತ್ಯಾಚಾರ ಪ್ರಕರಣಗಳ ಆರೋಪಿ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಇದೀಗ ಪ್ರಜ್ವಲ್‌ ವಿರುದ್ಧ ಮೂರನೇ ಅತ್ಯಾಚಾರ ಆರೋಪದ ಪ್ರಕರಣ ದಾಖಲಾಗಿದೆ.

ಈ ಹಿಂದೆ ಹೊಳೆನರಸೀಪುರ ಟೌನ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯು ನ್ಯಾಯಾಧೀಶರ ಎದುರು ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲಿಸುವಾಗ ಸಂಸದ ಪ್ರಜ್ವಲ್‌ ರೇವಣ್ಣ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಐಪಿಸಿ ಕಲಂ 376(ಅತ್ಯಾಚಾರ) ಸೇರ್ಪಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ಏ.28ರಂದು ದೂರು ದಾಖಲಾಗಿತ್ತು. 47 ವರ್ಷದ ಸಂತ್ರಸ್ತೆಯ ದೂರು ಆಧರಿಸಿ ಪೊಲೀಸರು ರೇವಣ್ಣ ಮತ್ತು ಪುತ್ರ ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ 354(ಎ)- ಲೈಂಗಿಕ ಕಿರುಕುಳ, ಐಪಿಎಸಿ ಸೆಕ್ಷನ್‌ 354(ಡಿ)- ಕಿರುಕುಳ ಉಂಟು ಮಾಡುವ ಉದ್ದೇಶದಿಂದ ದೇಹ ಸ್ಪರ್ಶ, ಐಪಿಸಿ ಸೆಕ್ಷನ್‌ 506- ಜೀವ ಬೆದರಿಕೆ ಹಾಗೂ ಐಪಿಸಿ ಸೆಕ್ಷನ್‌ 509- ಉದ್ದೇಶ ಪೂರ್ವಕವಾಗಿ ಆಕ್ಷೇಪಾರ್ಯ ಪದ ಬಳಕೆ, ಸನ್ನೆ, ಕ್ರಿಯೆಗಳ ಮೂಲಕ ಮಹಿಳೆಯ ಖಾಸಗಿತನಕ್ಕೆ ಧಕ್ಕೆ ಮಾಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು.

ಇದೀಗ ಸಂತ್ರಸ್ತೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸುವಾಗ ಪ್ರಜ್ವಲ್ ರೇವಣ್ಣ ತನ್ನ ಮೇಲೆ ರೇಪ್‌ ಮಾಡಿದ್ದಾಗಿ ಹೇಳಿಕೆ ನೀಡುವುದರಿಂದ ಈ ಪ್ರಕರಣದಲ್ಲಿ ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ 376 ಸೇರ್ಪಡೆ ಮಾಡಲಾಗಿದೆ. ಇದರಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದಿದ್ದು, ಪ್ರಜ್ವಲ್‌ ರೇವಣ್ಣಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.ಶಾಸಕ ಮಂಜುಗೆ ಪೆನ್‌ಡ್ರೈವ್‌ ಕೊಟ್ಟೆ: ನವೀನ್‌ಗೌಡ

ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಾದ ನವೀನ್‌ ಗೌಡ ಭಾನುವಾರ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ವೊಂದನ್ನು ಹಾಕಿದ್ದು, ತನಗೆ ಸಿಕ್ಕ ಪೆನ್‌ಡ್ರೈವ್‌ ನ್ನು ಶಾಸಕ ಎ.ಮಂಜುಗೆ ನೀಡಿದ್ದೇನೆ ಎಂದು ತಿಳಿಸಿದ್ದಾನೆ.‘ಏ.20 ರಂದು ನನಗೆ ನಗರದ ರಸ್ತೆಯ ಅಂಗಡಿ ಮುಂಗಟ್ಟೊಂದರ ಬಳಿ ಪೆನ್‌ಡ್ರೈವ್‌ ಸಿಕ್ಕಿತು. ಅದನ್ನು ನಾನು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಎ.ಮಂಜು ಅವರಿಗೆ ನೀಡಿದ್ದೆ’ ಎಂದು ತನ್ನ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾನೆ. ಅಲ್ಲದೆ, ಈ ಪೆನ್‌ಡ್ರೈವ್‌ ಪ್ರಕರಣದ ಹಿಂದೆ ಮಹಾ ನಾಯಕರೆಲ್ಲಾ ಇದ್ದಾರೆ ಎಂದು ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ. ಆ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್‌ ನಲ್ಲಿ ತಿಳಿಸಿದ್ದಾನೆ. ಈ ಪೋಸ್ಟ್‌ ಈಗ ಎಲ್ಲೆಡೆ ವೈರಲ್‌ ಆಗಿದೆ.ನವೀನ್‌ ಗೌಡ ಯಾರೋ ಗೊತ್ತಿಲ್ಲ: ಎ.ಮಂಜು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಆರೋಪಿ ನವೀನ್‌ಗೌಡ ಯಾರು ಎಂಬುದು ನನಗೆ ಗೊತ್ತಿಲ್ಲ. ನನಗೆ ಆತ ಪೆನ್‌ ಡ್ರೈವ್‌ ನ್ನು ಕೊಟ್ಟೂ ಇಲ್ಲ ಎಂದು ಅರಕಲಗೂಡು ಶಾಸಕ ಎ.ಮಂಜು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾತನಾಡಿದರು. ಏ. 21 ರಂದು ಯಾವುದೋ ಮದುವೆಗೆ ಹೋಗಿರುವುದು ಸತ್ಯ. ಮದುವೆಯಲ್ಲಿ ನೂರಾರು ಜನರನ್ನು ಮಾತನಾಡಿಸಿದ್ದೇನೆ. ಅವರಲ್ಲಿ ನವೀನ್‌ ಗೌಡ ಯಾರು ಎಂಬುದು ಗೊತ್ತಿಲ್ಲ. ಅವನನ್ನು ನೋಡಿಯೇ ಇಲ್ಲ. ನವೀನ್ ಗೌಡ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ನಮ್ಮ ಮತ್ತು ದೇವೇಗೌಡರ ಸಂಬಂಧ ಹಾಳು ಮಾಡಲು ಈ ರೀತಿ ಮಾಡಲಾಗುತ್ತಿದೆ. ಇಂತಹ ನೀಚ ರಾಜಕಾರಣವನ್ನು ನಾನು ಯಾವತ್ತೂ ಮಾಡಿಲ್ಲ ಎಂದರು.ಮೊದಲು ನವೀನ್ ಗೌಡನ ಬಂಧನ ಆಗಲಿ. ಅವನ ಮೂಲಕವೇ ಪೆನ್ ಡ್ರೈವ್ ಎಲ್ಲಾ ಇತಿಹಾಸ ತಿಳಿಯುತ್ತದೆ. ಯಾಕೆ ಅವನ ಬಂಧನ ತಡವಾಗುತ್ತಿದೆ ಎಂಬುದು ಗೊತ್ತಿಲ್ಲ. ನಾನು ಈಗಲೂ ಆತನ ಬಂಧನಕ್ಕೆ ಆಗ್ರಹಿಸುತ್ತಿದ್ದೇನೆ ಎಂದು ಅವರು ಹೇಳಿದರು.

ದೇವೇಗೌಡರ ಕುಟುಂಬಕ್ಕೆ ದ್ರೋಹ ಮಾಡಲ್ಲ:

ರಾಜಕೀಯದ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ದೇವೇಗೌಡರು. ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ. ಪೆನ್ ಡ್ರೈವ್‌ ಪ್ರಕರಣದಿಂದ ದೇವೇಗೌಡರು ಬಹಳ ನೊಂದಿದ್ದಾರೆ. ಅವರನ್ನು ಮೊನ್ನೆ ಭೇಟಿ ಮಾಡಿದಾಗ ಈ ವಿಚಾರದ ಬಗ್ಗೆ ನನಗೆ ಯಾಕೆ ಮೊದಲೇ ಹೇಳಲಿಲ್ಲ ಎಂದು ಕೇಳಿದರು. ಯಾರಿಗೂ ಇಂತಹ ಸ್ಥಿತಿ ನಿರ್ಮಾಣವಾಗಬಾರದು. ನಾನು ಜೈಲಿನಲ್ಲಿ ರೇವಣ್ಣ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ. ಅವರ ಪ್ರತಿ ಕಷ್ಟ ಕಾಲದಲ್ಲೂ ನಾನು ಇರುತ್ತೇನೆ ಎಂದರು.ನಾನು ಅವರ ಕುಟುಂಬದ ಜೊತೆಯಲ್ಲಿ ಇದ್ದೇನೆ ಎಂಬ ಕಾರಣಕ್ಕಾಗಿಯೇ ಈಗ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಜ್ವಲ್‌ ಕೇಸ್‌ ಸಿಬಿಐಗೆ ನೀಡಿ ಎನ್ನಲು ಬಿಜೆಪಿಗೆ ನೈತಿಕತೆ ಇಲ್ಲ

ಪ್ರಜ್ವಲ್‌ ಕೇಸ್‌ ಸಿಬಿಐಗೆ ಕೊಡಲ್ಲ: ಸಿಎಂ

ಬಿಜೆಪಿಯವರು ಈ ಹಿಂದೆ ಸಿಬಿಐ ಎಂದರೆ ಕರಪ್ಷನ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ ಎಂದು ಹೇಳಿದ್ದರು. ಇದೀಗ ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ಕೊಡುವಂತೆ ಆಗ್ರಹಿಸಲು ಬಿಜೆಪಿ, ಜೆಡಿಎಸ್​​ಗೆ ಯಾವ ನೈತಿಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.ಭಾನುವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂಬ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರ ಆಗ್ರಹವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.ಇದೇ ಬಿಜೆಪಿಯವರು ಸಿಬಿಐ ಸರಿಯಿಲ್ಲ ಎಂದಿದ್ದರು. ಬಳಿಕ ನಾವು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಾವು ಏಳು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಎಷ್ಟೇ ಒತ್ತಾಯಿಸಿದರೂ ಒಂದೂ ಪ್ರಕರಣವನ್ನು ಬಿಜೆಪಿಯವರು ಸಿಬಿಐಗೆ ನೀಡಲಿಲ್ಲ. ಹೀಗಿರುವಾಗಿ ಸಿಬಿಐ ತನಿಖೆಗೆ ಒತ್ತಾಯಿಸಲು ಅವರಿಗೆ ಯಾವ ನೈತಿಕತೆಯಿದೆ. ರಾಜ್ಯ ಪೊಲೀಸರ ಮೇಲೆ ಅವರಿಗೆ ನಂಬಿಕೆ ಇಲ್ಲವೇ ಎಂದು ಕಿಡಿ ಕಾರಿದರು.

ಹಿಂದೆ ನಾನು ಏಳು ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಟ್ಟಿದ್ದೆ. ಆ ಪ್ರಕರಣಗಳಲ್ಲಿ ತನಿಖಾ ವರದಿ ಏನಾಯಿತು? ಪರೇಶ್‌ ಮೇಸ್ತಾ ಸಾವನ್ನು ಬಿಜೆಪಿಯವರು ರಾಜಕಾರಣಕ್ಕೆ ಬಳಸಿಕೊಂಡರು. ಅವರದ್ದೇ ಸರ್ಕಾರದ ಅಡಿಯ ಸಿಬಿಐ ಯಾವ ವರದಿ ನೀಡಿತು? ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ. ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕಸುಬು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ಇನ್ನು ದೇವರಾಜೇಗೌಡ ಅವರನ್ನು ಬಂಧಿಸಿರುವುರು ಸಂತ್ರಸ್ತೆಯ ದೂರಿನ ಆಧಾರದ ಮೇಲೆ. ನಾವು ಪೊಲೀಸ್ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುತ್ತಿಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜೋಶಿ ಜವಾಬ್ದಾರಿಯಿಂದ ಮಾತನಾಡಲಿ:ಸಿಬಿಐ ತನಿಖೆಗೆ ಆಗ್ರಹಿಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅವರು ಜವಾಬ್ದಾರಿಯಿಂದ ಮಾತನಾಡಲಿ. ಪರೇಶ್ ಮೆಸ್ತಾ ಪ್ರಕರಣದಲ್ಲಿ ಏನಾಯಿತು ಎಂಬುದನ್ನು ಹೇಳಲಿ. ಎಸ್ಐಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ. ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದು ಬೇಡ ಎಂದರು.ರಾಹುಲ್ ಗಾಂಧಿ ಅವರು ಬಹಿರಂಗ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿ. ‘ನಮ್ಮ ಕಾಂಗ್ರೆಸ್​​ನವರಿಗೆ ಧೈರ್ಯ ಇದೆ. ಆತ್ಮಸ್ಥೈರ್ಯ ಇದೆ. ನಾವು ಸತ್ಯ ಹೇಳುತ್ತೇವೆ ಎಂಬುದೇ ಇದಕ್ಕೆ ಕಾರಣ. ಹೀಗಾಗಿಯೇ ಅದಕ್ಕೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಇದ್ದೇವೆ’ ಎಂದರು.

ಪ್ರಜ್ವಲ್‌ ಕೇಸಲ್ಲಿ ಏನೇನೋ ಹೇಳಿಕೆ ಕೊಟ್ರೆ ಕರೆಸಿ ವಿಚಾರಣೆ: ಸಚಿವ ಪರಮೇಶ್ವರ್‌ ‘ಪ್ರಜ್ವಲ್‌ ರೇವಣ್ಣ ಮೇಲಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡುವಾಗ ಸಾರ್ವಜನಿಕರು ಹಾಗೂ ನಾಯಕರು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಹೇಳಿಕೆಗಳನ್ನು ನೀಡಿದವರನ್ನೇ ಸಿಆರ್‌ಪಿಸಿಯ 41-ಎ ಅಡಿಯಲ್ಲಿ ತನಿಖೆಗೆ ಕರೆದು ಹೇಳಿಕೆ ದಾಖಲಿಸಿಕೊಳ್ಳುತ್ತೇವೆ’ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ.ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಅವರಿಗೂ ನೋಟಿಸ್ ನೀಡಲಾಗುವುದೇ ಎಂಬ ಪ್ರಶ್ನೆಗೆ, ‘ಅವರು ಮಾಜಿ ಮುಖ್ಯಮಂತ್ರಿ. ಈ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ನಂಬಿದ್ದೇನೆ. ಈ ಪ್ರಕರಣದ ಕುರಿತು ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು, ಎಲ್ಲರೂ ಜಾಗರೂಕರಾಗಿರಬೇಕು. ಈ ಎಚ್ಚರಿಕೆ ಎಲ್ಲರಿಗೂ ಅನ್ವಯವಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.ಪ್ರಜ್ವಲ್‌ಗಾಗಿ ಎಸ್‌ಐಟಿ ವಿದೇಶಕ್ಕೆ ಹೋಗಲ್ಲ:ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಜ್ವಲ್‌ ಅವರನ್ನು ವಾಪಸ್ ಕರೆತರಲು ವಿದೇಶಕ್ಕೆ ಹೋಗುವುದಿಲ್ಲ. ನಮ್ಮಿಂದ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ಇಂಟರ್‌ಪೋಲ್ ಪ್ರಜ್ವಲ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಪ್ರಜ್ವಲ್ ಪತ್ತೆಯಾದ ದೇಶವು ಇಂಟರ್‌ಪೋಲ್‌ಗೆ ಮಾಹಿತಿ ನೀಡಲಿದ್ದು, ಬಳಿಕ ಸಿಬಿಐಗೆ ತಿಳಿಯಲಿದೆ. ಸಿಬಿಐ ಮೂಲಕ ನಮ್ಮ ಎಸ್‌ಐಟಿಗೆ ತಿಳಿಯಲಿದೆ ಎಂದು ಇದೇ ವೇಳೆ ಗೃಹ ಸಚಿವರು ಸ್ಪಷ್ಟಪಡಿಸಿದರು.ದೇವರಾಜೇಗೌಡ ಬಂಧನದಲ್ಲಿ ಕಾಂಗ್ರೆಸ್‌ ಷಡ್ಯಂತ್ರ ಇದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಇದೊಂದು ಸೂಕ್ಷ್ಮವಾಗಿರುವ ಪ್ರಕರಣ. ಇದಕ್ಕೆ ಸಂಬಂಧಿಸಿದಂತೆ ರಾಜಕೀಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.

ಪ್ರಹ್ಲಾದ್‌ ಜೋಶಿ ಅವರ ಹೇಳಿಕೆಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಇದು ಗಂಭೀರ ಪ್ರಕರಣ ಆಗಿರುವುದರಿಂದ ಅವರು ಏನೇನು ಮಾತನಾಡಿದ್ದಾರೆ ಎಂದು ತನಿಖೆ ಪೂರ್ಣಗೊಳ್ಳುವ ಮೊದಲೇ ಮಾಹಿತಿ ಹಂಚಿಕೊಳ್ಳಲು ಆಗಲ್ಲ. ಇಷ್ಟೆಲ್ಲಾ ಮಾತನಾಡುವ ಜೋಶಿ ಅವರು ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಪ್ರಧಾನಿ ಮೋದಿಗೆ ಏನು ಅಡ್ಡಿಯಾಗಿದೆ ಎಂಬುದನ್ನು ಪ್ರಶ್ನಿಸಲಿ ಎಂದು ಹೇಳಿದರು.ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರು ಮತ್ತು ನಾಯಕರಿಗೆ ನಾನು ಮನವಿ ಮಾಡುತ್ತೇನೆ. ಇಲ್ಲದಿದ್ದರೆ ನಾವು ಅವರನ್ನು ತನಿಖೆಗೆ ಕರೆದು ಸಿಆರ್‌ಪಿಸಿಯ 41 ಎ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಬೇಕಾಗಬಹುದು ಎಂದರು.ಪೆನ್‌ಡ್ರೈವ್ ಕೇಸ್ ಸಿಬಿಐಗೆ ವಹಿಸಲು ಒತ್ತಾಯಿಸಿ ಮದ್ದೂರಲ್ಲಿ ಜೆಡಿಎಸ್ ಧರಣಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಚ್ಯುತಿ ತರಲು ಮುಂದಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು ಮದ್ದೂರಿನಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ಡಿ.ಸಿ. ತಮ್ಮಣ್ಣ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆಗೆ ಇಳಿದ ನೂರಾರು ಕಾರ್ಯಕರ್ತರು, ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಘೋಷಣೆ ಕೂಗಿ ಹೆದ್ದಾರಿಯಲ್ಲಿ ಕೆಲಕಾಲ ಧರಣಿ ನಡೆಸಿದರು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.ಪ್ರತಿಭಟನೆ ವೇಳೆ ರೊಚ್ಚಿಗೆದ್ದ ಕಾರ್ಯಕರ್ತರು ಡಿ.ಕೆ .ಶಿವಕುಮಾರ್ ಭಾವಚಿತ್ರವುಳ್ಳ ಫ್ಲೆಕ್ಸ್‌ಗೆ ಚಪ್ಪಲಿ ಸೇವೆ ಮಾಡಿದರಲ್ಲದೇ ಪ್ರತಿಕೃತಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರು ಇದ್ದರು.

ಎಸ್ಐಟಿ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಅನುಮಾನವಾಗಿದೆ ಹೀಗಾಗಿ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟಕಾರರು ಆಗ್ರಹ ಪಡಿಸಿದರು.

ಕಿಡ್ನಾಪ್‌ ಕೇಸಿನ ಮಹಿಳೆ ನಮ್ಮ ಮನೆಯಲ್ಲಿದ್ದಳು: ಸಂಬಂಧಿಗಳು

ಎಚ್.ಡಿ.ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಪ್ರಕರಣದ ಸಂತ್ರಸ್ತೆ ಮಹಿಳೆ ನಮ್ಮ ಮನೆಗೆ ಬಂದಿದ್ದು ನಿಜ ಹಾಗೂ ನಮ್ಮ ಮನೆಯಿಂದಲೇ ಪೊಲೀಸರು ಮಹಿಳೆಯನ್ನು ಕರೆದುಕೊಂಡು ಹೋಗಿದ್ದೂ ಸತ್ಯ ಎಂದು ಆಕೆಯ ಹುಣಸೂರಿನಲ್ಲಿರುವ ಸಂಬಂಧಿಕರು ತಿಳಿಸಿದ್ದಾರೆ.ಕಿಡ್ನ್ಯಾಪ್ ಪ್ರಕರಣದ ಬಗ್ಗೆ ತಮಗೆ ಏನೂ ಗೊತ್ತಿಲ್ಲ. ಆದರೆ ಸಂತ್ರಸ್ತೆ ನಮ್ಮ ಸಂಬಂಧಿಯಾದರೂ ಅವರೊಂದಿಗೆ ಹೆಚ್ಚಿನ ಒಡನಾಟ ಇರಲಿಲ್ಲ. ಆಕೆ ಒಬ್ಬಳೇ ನಮ್ಮ ಮನೆಗೆ ಬಂದಿದ್ದರು. ದಿಢೀರನೆ ಬಂದಿದ್ದು ಏಕೆ? ಎಂದು ಪ್ರಶ್ನಿಸಿದಾಗ ಆಸ್ಪತ್ರೆಗೆ ಬಂದಿದ್ದೇನೆ ಅಂತ ಹೇಳಿದರು. ಅವರು ನಮ್ಮ ನೆಂಟರು ಎನ್ನುವ ಕಾರಣಕ್ಕೆ ಮನೆಗೆ ಸೇರಿಸಿಕೊಂಡೆವು. ಬಳಿಕ ನಮ್ಮ ಪತಿಯ ಫೋನ್ ಪಡೆದು ಯಾರಿಗೋ ಕರೆ ಮಾಡಿದ್ದರು. ಅದಾದ ಕೆಲವೇ ಹೊತ್ತಿನಲ್ಲೇ ಆಕೆಯ ಅಳಿಯಂದಿರು ಸಹ ನಮ್ಮ ಮನೆಗೆ ಬಂದರು. ಅವರಿಗೆ ಕುಡಿಯಲು ಜ್ಯೂಸ್ ಕೊಟ್ಟೆವು, ಆದರೆ ಕುಡಿಯಲಿಲ್ಲ. ಆಕೆಯ ಅಳಿಯಂದಿರೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿಸಿದ್ದಾರೆ.ಹನಗೋಡು ಹೋಬಳಿಯ ಕಾಳೇನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಲಾಗಿದೆ ಎಂದು ವರದಿಗಳು ತಿಳಿಸಿದ್ದವು.ನನ್ನನ್ನು ಯಾರೂ ಕಿಡ್ನ್ಯಾಪ್‌ ಮಾಡಿಲ್ಲ: ಸಂತ್ರಸ್ಥೆ ವೀಡಿಯೋ

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲು ಸೇರುವಂತೆ ಮಾಡಿದ ಮಹಿಳೆಯ ಅಪಹರಣ ಕೇಸಿಗೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಅಪಹರಣಕ್ಕೊಳಗಾಗಿ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯೇ, ‘ತನ್ನನ್ನು ಯಾರೂ ಕಿಡ್ನ್ಯಾಪ್‌ ಮಾಡಿಲ್ಲ’ ಎಂದು ಹೇಳಿರುವ ವಿಡಿಯೋವೊಂದು ಹರಿದಾಡುತ್ತಿದೆ.

2 ನಿಮಿಷ 32 ಸೆಕೆಂಡ್‌ ಇರುವ ಈ ವಿಡಿಯೋದಲ್ಲಿ ಸಂತ್ರಸ್ತ ಮಹಿಳೆ ತನ್ನನ್ನು ಯಾರೂ ಕಿಡ್ನ್ಯಾಪ್‌ ಮಾಡಿಲ್ಲ. ಪ್ರಜ್ವಲ್‌ ಪೆನ್‌ ಡ್ರೈವ್‌ ಪ್ರಕರಣ ಹೊರ ಬಂದ ನಂತರ ಜನರು ಏನೇನೆಲ್ಲಾ ಮಾತನಾಡುತ್ತಿದ್ದರು. ಹಾಗಾಗಿ, ನಾನೇ ಬೇಜಾರು ಕಳೆಯಲೆಂದು ನಾಲ್ಕಾರು ದಿನ ಹೊರಗೆ ಹೋಗಿದ್ದೆ. ಆದರೆ, ನನ್ನ ಮಗ ಇದ್ಯಾವುದನ್ನೂ ತಿಳಿಯದೆ ಆತುರದಲ್ಲಿ ಪೊಲೀಸರಿಗೆ ಕಂಪ್ಲೆಂಟ್‌ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಾಳೆ. ಆದರೆ, ಈ ವಿಡಿಯೋ ರೆಕಾರ್ಡ್‌ ಆಗಿದ್ದು ಎಲ್ಲಿ, ಯಾವಾಗ ಎಂಬುದು ತಿಳಿದು ಬಂದಿಲ್ಲ.ಎಚ್‌.ಡಿ.ರೇವಣ್ಣ ಜಾಮೀನು ಅರ್ಜಿ ಇಂದು ವಿಚಾರಣೆ

ಮೈಸೂರು ಜಿಲ್ಲೆ ಕೆ.ಆರ್‌.ನಗರದ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಲ್ಲಿರುವ ಮಾಜಿ ಸಚಿವ ಹಾಗೂ ಹಾಲಿ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅವರ ಜಾಮೀನು ಅರ್ಜಿ ಸಂಬಂಧ ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಈ ಪ್ರಕರಣ ಸಂಬಂಧ ಆರೋಪಿ ರೇವಣ್ಣ ಅವರನ್ನು ನಾಲ್ಕು ದಿನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಎಸ್‌ಐಟಿ ಅಧಿಕಾರಿಗಳು ಕಳೆದ ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಧೀಶರು ಆರೋಪಿಯನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಗುರುವಾರ ಜಾಮೀನು ಅರ್ಜಿ ವಿಚಾರಣೆ ಕೈತ್ತಿಕೊಂಡಿದ್ದ ನ್ಯಾಯಾಧೀಶರು ಎಸ್‌ಐಟಿ ಪರ ವಕೀಲರು ಮತ್ತು ರೇವಣ್ಣ ಪರ ವಕೀಲರ ವಾದ-ಪ್ರತಿವಾದ ಆಲಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದರು. ಸೋಮವಾರ ಜಾಮೀನು ಅರ್ಜಿ ವಿಚಾರಣೆ ಮುಂದುರೆಯುವುದರಿಂದ ರೇವಣ್ಣಗೆ ಜೈಲಾ ಅಥವಾ ಬೇಲಾ ಎಂಬ ಕುತೂಹಲ ಏರ್ಪಟ್ಟಿದೆ.

ಎಸ್‌ಐಟಿ ಪರ ವಕೀಲರು ಆರೋಪಿಗೆ ಜಾಮೀನು ನೀಡಬಾರದು ಎಂದು ಪ್ರಬಲವಾಗಿ ವಾದಿಸುತ್ತಿದ್ದಾರೆ. ಕಕ್ಷಿದಾರನ ಮೇಲೆ ಯಾವುದೇ ಗುರುತರ ಆರೋಪಗಳು ಇಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ರೇವಣ್ಣ ಪರ ವಕೀಲರು ವಾದಿಸುತ್ತಿದ್ದಾರೆ.