ನಾಳೆಯಿಂದ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ

| Published : Dec 28 2023, 01:45 AM IST

ಸಾರಾಂಶ

ರಾಜ್ಯ ವೈಜ್ಞಾನಿಕ ಪರಿಷತ್‌ನಿಂದ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿ ಡಿ. 29, 30ರಂದು ನಡೆಯಲಿದೆ. ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ.

ನರಗುಂದ: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ಡಿ. 29, 30ರಂದು ಎರಡು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ವೈಜ್ಞಾನಿಕ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಎಲ್. ಮರಿಗೌಡ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷರಾಗಿ ವೈಚಾರಿಕ ಚಿಂತಕ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಇರುವರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಸಮ್ಮೇಳನದ ಸಾರಥ್ಯ ವಹಿಸಲಿದ್ದಾರೆಂದು ಹೇಳಿದರು.ಮೌಢ್ಯ, ಕಂದಾಚಾರ, ಮಾಟ-ಮಂತ್ರಗಳು ಹಾಗೂ ಮೂಢ ನಂಭಿಕೆಗಳಿಂದ ಜನರನ್ನು ದೂರಮಾಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿ ಜನರಲ್ಲಿ ಜಾಗೃತಿ ಮೂಡಿಸುವುದೇ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದರು.ಎಚ್. ನರಸಿಂಹಯ್ಯ ಪ್ರಶಸ್ತಿಗೆ ಭಾಜನರಾದ ಸಮಾಜ ಸೇವಕ ವಿ.ಎನ್. ಕೊಳ್ಳಿ ಅವರು ಮಾತನಾಡಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮೂರು ವರ್ಷಗಳಿಂದ ರಾಜ್ಯಮಟ್ಟದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಸರ್ಕಾರದ ಮಾಹಿತಿ ಮತ್ತು ತಂತ್ರ ಜ್ಞಾನ ಇಲಾಖೆಯ ಸಹಕಾರದೊಂದಿಗೆ, ಸತೀಶ್ ಜಾರಕಿಹೊಳಿ ಅವರ ಸರ್ವಾಧ್ಯಕ್ಷತೆಯಲ್ಲಿ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಅವರ ನೆನಪಿನಲ್ಲಿ ವೈಚಾರಿಕ ದಿನ ಆಯೋಜಿಸಲಾಗಿದೆ ಎಂದು ತಿಳಿಸಿದರು.ಸಮ್ಮೇಳನದಲ್ಲಿ ವಿಜ್ಞಾನ, ಖಗೋಳ, ತಂತ್ರಜ್ಞಾನ ಮತ್ತು ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ. ಸಮ್ಮೇಳನದಲ್ಲಿ ಜಿಲ್ಲೆಗೊಬ್ಬರನ್ನು ಗುರುತಿಸಿ 37 ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತದೆ ಎಂದರು.ಬಸವ ಕೇಂದ್ರದ ಚನಬಸಪ್ಪ ಕಂಠಿ, ಡಾ. ವಿ.ಎಸ್. ವೀರನಗೌಡ್ರ, ಚಂಬಣ್ಣ ಕೋರಿ, ಶಿವಪುತ್ರಪ್ಪ ಹುಂಬಿ, ಶಿವಪ್ಪ ಬೋಳಶೆಟ್ಟಿ ಇತರರಿದ್ದರು.