ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಜಲಚರಗಳ ಜೀವಕ್ಕೆ ಅಪಾಯ ತಂದೊಡ್ಡುವುದರ ಜತೆಗೆ ಸಮುದ್ರದ ಜೀವವೈವಿಧ್ಯಕ್ಕೂ ಧಕ್ಕೆ ಉಂಟುಮಾಡುತ್ತಿದೆ.
ಕಾರವಾರ: ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕಾರವಾರದ ಅರಣ್ಯ ಇಲಾಖೆಯ ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ವಿಭಾಗವು 22 ದಿನಗಳಲ್ಲಿ ಸುಮಾರು 4,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿರುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಸಾಧನೆಯಾಗಿದೆ.
ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಜಲಚರಗಳ ಜೀವಕ್ಕೆ ಅಪಾಯ ತಂದೊಡ್ಡುವುದರ ಜತೆಗೆ ಸಮುದ್ರದ ಜೀವವೈವಿಧ್ಯಕ್ಕೂ ಧಕ್ಕೆ ಉಂಟುಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಕರಾವಳಿ, ಸ್ವಚ್ಛ ಸಮುದ್ರ ಮತ್ತು ಸುರಕ್ಷಿತ ಸಮುದ್ರ ಜೀವವೈವಿಧ್ಯ ಎಂಬ ಗುರಿಯೊಂದಿಗೆ ಕಳೆದ ಆಗಸ್ಟ್ನಲ್ಲಿ ಕಾರವಾರದ ಮಾಜಾಳಿಯಿಂದ ಅಂಕೋಲಾವರೆಗಿನ ಸಮುದ್ರ ತೀರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮಾಡುವ ಕಾರ್ಯವನ್ನು ಆರಂಭಿಸಿದ ಅರಣ್ಯ ಇಲಾಖೆಯ ಕೋಸ್ಟಲ್ ಆ್ಯಂಡ್ ಮರೈನ್ ಇಕೋ ಸಿಸ್ಟಮ್ ವಿಭಾಗವು 3 ತಿಂಗಳ ಅವಧಿಯಲ್ಲಿನ 22 ದಿನಗಳ ಕಾಯಾಚರಣೆಯ ಮೂಲಕ 4000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದೆ.ಈ ತ್ಯಾಜವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟ ನಗರಸ್ಥಳಿಯ ಸಂಸ್ಥೆಗಳಿಗೆ ಸೂಕ್ತ ರೀತಿಯಲ್ಲಿ ವಿಂಗಡಿಸಿ, ಹಸ್ತಾಂತರ ಮಾಡುವುದು ಮಾತ್ರವಲ್ಲದೇ ಈ ಬಗ್ಗೆ ಅವರಿಂದ ಸ್ವೀಕೃತಿಯನ್ನೂ ಪಡೆದಿದೆ.
ಪರಿಸರ ಕಾಳಜಿ: ಬೀಚ್ಗಳಿಗೆ ಆಗಮಿಸುವ ಪ್ರವಾಸಿಗರು ಬೀಚ್ ಸೌಂದರ್ಯವನ್ನು ಆನಂದಿಸುವುದರ ಜತೆಗೆ ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಸೇರಿದಂತೆ ಇತರೆ ಆಹಾರ ಪದಾರ್ಥಗಳ ತ್ಯಾಜ್ಯಗಳನ್ನು ಸ್ವಯಂ ಪ್ರೇರಣೆಯಿಂದ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಸಣ್ಣ ಪರಿಸರ ಕಾಳಜಿಯೇ, ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಸುಂದರ ಪ್ರಕೃತಿಯನ್ನು ಉಳಿಸಿಕೊಡುವ ದೊಡ್ಡ ಕೊಡುಗೆಯಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಗಜಾನನ ಎಸ್. ನಾಯ್ಕ ತಿಳಿಸಿದ್ದಾರೆ.