ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಪರಿಷ್ಕೃತ ವೇಳಾ ಪಟ್ಟಿಯ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೋಮವಾರ ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಪರಿಷ್ಕೃತ ವೇಳಾ ಪಟ್ಟಿಯ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೋಮವಾರ ಬಿಡುಗಡೆ ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜತೆ ಸೋಮವಾರ ನಡೆದ ಸಭೆ ಸಂದರ್ಭ ಪಟ್ಟಿಯನ್ನು ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ, ಪ್ರಕಟಿಸಿದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 567 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 4,05,803 ಮತದಾರರಿದ್ದು, ಇವರಲ್ಲಿ 1,98,294 ಪುರುಷರು ಮತ್ತು 2,07,505 ಮಹಿಳಾ ಮತದಾರರು ಜೊತೆಗೆ 4 ಇತರೆ ಮತದಾರರನ್ನು ಒಳಗೊಂಡಿದೆ ಎಂದರು.ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಮತದಾರರಿಂದ ಗಣತಿ ನಮೂನೆಯನ್ನು ಸಂಗ್ರಹಿಸಿ ಡಿಜಿಟಲೀಕರಣ ಮಾಡಿ ಕರಡು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರ ಪೈಕಿ ಜಿಲ್ಲೆಯಲ್ಲಿ 58,893 ಮತದಾರರಿಗೆ ಮತದಾರರ ನೋಂದಣಾಧಿಕಾರಿಗಳು/ ಸಹಾಯಕ ಮತದಾರರ ನೋಂದಣಾಧಿಕಾರಿಗಳು ನೋಟೀಸ್ ನೀಡಿ ವಿಚಾರಣೆ ನಡೆಸಿ ಬಿಎಲ್‌ಒಗಳಿಂದ ವರದಿ ಪಡೆದು, ಅಂತಿಮ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,09,115 ಮತದಾರರಿದ್ದು, 1,01,316 ಪುರುಷ ಮತದಾರರು ಮತ್ತು 1,07,797 ಮಹಿಳಾ ಮತದಾರರು ಇತರರು ಇಬ್ಬರು ಮತದಾರರನ್ನು ಒಳಗೊಂಡಿದ್ದು, 285 ಮತಗಟ್ಟೆಗಳನ್ನು ಹೊಂದಿದೆ ಎಂದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಯಂತೆ 1,96,688 ಮತದಾರರಿದ್ದು, 96,978 ಪುರುಷರು ಮತ್ತು 99,708 ಮಹಿಳಾ ಮತದಾರರು ಮತ್ತು ಇಬ್ಬರು ಇತರ ಮತದಾರರನ್ನೊಳಗೊಂಡಿದೆ. 282 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ದಿನಾಂಕ: 01-10-2026 ಅರ್ಹತಾ ದಿನಾಂಕವಾಗಿದ್ದು, ಕರಡು ಮತದಾರರ ಪಟ್ಟಿಯ ಪ್ರಕಟಣೆ ದಿನದಿಂದ (ಆ. 24ರಿಂದ ಸೆ.23ರವರೆಗೆ) ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ಹೆಸರು ಸೇರ್ಪಡೆ, ಹೆಸರು ತೆಗೆಯುವುದು ಹಾಗೂ ತಿದ್ದುಪಡಿ, ವರ್ಗಾವಣೆ, ಎಪಿಕ್ ಕಾರ್ಡ್ ಬದಲಾವಣೆ ಮತ್ತು ಪಿಡಬ್ಲ್ಯೂಡಿ ಗುರುತು ಮಾಡಲು ನಿಗದಿತ ನಮೂನೆ ಸಲ್ಲಿಸಬಹುದಾಗಿದೆ ಎಂದರು.ಎಸ್‌ಐಆರ್ ಸಂದರ್ಭದಲ್ಲಿ ಮ್ಯಾಪಿಂಗ್ ಆಗದಿರುವುದು, ಹಾಗೆಯೇ ಮ್ಯಾಪಿಂಗ್‌ನಲ್ಲಿ ವ್ಯತ್ಯಾಸಗಳಾಗಿರುವುದು ಕಂಡುಬಂದಿದೆ. ಆದ್ದರಿಂದ ಅನೊಮಲೀಸ್ ಮತದಾರರಿಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗ ಅಧಿಸೂಚಿಸಿರುವ ದಾಖಲೆಗಳ ಪೈಕಿ ಆಧಾರ್ ಕಾರ್ಡ್ ಜೊತೆಗೆ ಎರಡು ದಾಖಲೆ ಸಲ್ಲಿಸಬೇಕು. ಮ್ಯಾಪಿಂಗ್ ಆಗದಿರುವ ಮತದಾರರಿಗೆ ಭಾರತ ಚುನಾವಣಾ ಆಯೋಗ ಅಧಿಸೂಚಿಸಿರುವ ದಾಖಲೆಗಳ ಪೈಕಿ ಎರಡು ದಾಖಲಾತಿ ಸಲ್ಲಿಸಬೇಕಿದೆ ಎಂದರು.ಹಾಗೆಯೇ ಮ್ಯಾಪಿಂಗ್ ಆಗದಿರುವ ಮತದಾರರು ಸಲ್ಲಿಸಿರುವ ದಾಖಲೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಹಂತದಲ್ಲಿ ಪರಿಶೀಲಿಸಲಾಗುತ್ತದೆ. ಈ ಕಾರ್ಯಕ್ಕಾಗಿ 58,893 ಮತದಾರರಿಗೆ ನೋಟೀಸ್ ನೀಡಿ ವಿಚಾರಣೆ ಮಾಡಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು 73 ಹೆಚ್ಚುವರಿ ಸಹಾಯಕ ಮತದಾರರ ನೋಂದಾಣಾಧಿಕಾರಿ ನೇಮಕ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಬಿಜೆಪಿಯ ಸಜಿಲ್‌ಕೃಷ್ಣ, ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗಿದ್ದು, ಬಿಎಲ್‌ಒಗಳು ಸಹ ಶ್ರಮ ವಹಿಸಿದ್ದಾರೆ ಎಂದರು. ಬಹುಜನ ಸಮಾಜ ಪಕ್ಷದ ದಿವಿಲ್ ಕುಮಾರ್ ಮಾತನಾಡಿ, ಹಾಡಿಗಳಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಇಲ್ಲದಿರುವ ಕುಟುಂಬಗಳಿವೆ. ಆದ್ದರಿಂದ ಮತ್ತೊಮ್ಮೆ ಆಧಾರ್ ಕಾರ್ಡ್ ಮಾಡುವಂತಾಗಬೇಕು ಎಂದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ಮತ್ತೊಮ್ಮೆ ತಾಲೂಕು ಮಟ್ಟದಲ್ಲಿ ಆಧಾರ್ ಕಾರ್ಡ್ ಶಿಬಿರ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಆಮ್ ಆದ್ಮಿ ಪಕ್ಷದ ಎ.ಕೆ. ಅಪ್ಪಯ್ಯ, ಬೋಜಣ್ಣ, ಪೃಥ್ವಿ ಅವರು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಮಂಜುನಾಥ ರಾಮಣ್ಣ ಇದ್ದರು.