ರೇಷ್ಮೆ ಇಲಾಖೆಗೆ ಸೇರಿದ 4.35 ಎಕರೆ ಜಾಗವನ್ನು ನ್ಯಾಯಾಲಯ ಸಂಕೀರ್ಣಕ್ಕೆ ಗುರುತು ಮಾಡಲಾಗಿದೆ. ಸಂಕೀರ್ಣದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ, ಕಿರಿಯ ನ್ಯಾಯಾಲಯ, ನ್ಯಾಯಾಧೀಶರ ಮತ್ತು ಡಿ ಗ್ರೂಪ್ ನೌಕರರ ವಸತಿಗೃಹ, ವಕೀಲರ ವಾಹನಗಳ ನಿಲ್ದಾಣ ಹಾಗೂ ಕಕ್ಷಿದಾರರಿಗೆ ಮೂಲ ಸೌಲಭ್ಯ ಕಲ್ಪಿಸುವ ಕುರಿತು 28 .25 ಲಕ್ಷ ರು. ವೆಚ್ಚದ ಯೋಜನೆಯ ಅಂದಾಜು ಪಟ್ಟಿ ಪ್ರಸ್ತಾವನೆಯೊಂದಿಗೆ ಸಲ್ಲಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಸಂಬಂಧ ಹೈಕೋರ್ಟ್ ಮತ್ತು ಮಂಡ್ಯ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ಜಿಲ್ಲಾ ಸತ್ರ ನ್ಯಾಯಾಧೀಶರಾದ ಸುಬ್ರಹ್ಮಣ್ಯ, ಜಿಲ್ಲಾಧಿಕಾರಿ ಡಾ.ಕುಮಾರ್, ಸ್ಥಳೀಯ ನ್ಯಾಯಾಧೀಶರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ತೆರಳಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸಿ ನೀಲ ನಕ್ಷೆ ವೀಕ್ಷಣೆ ಮಾಡಿದರು.

ರೇಷ್ಮೆ ಇಲಾಖೆಗೆ ಸೇರಿದ 4.35 ಎಕರೆ ಜಾಗವನ್ನು ನ್ಯಾಯಾಲಯ ಸಂಕೀರ್ಣಕ್ಕೆ ಗುರುತು ಮಾಡಲಾಗಿದೆ. ಸಂಕೀರ್ಣದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ, ಕಿರಿಯ ನ್ಯಾಯಾಲಯ, ನ್ಯಾಯಾಧೀಶರ ಮತ್ತು ಡಿ ಗ್ರೂಪ್ ನೌಕರರ ವಸತಿಗೃಹ, ವಕೀಲರ ವಾಹನಗಳ ನಿಲ್ದಾಣ ಹಾಗೂ ಕಕ್ಷಿದಾರರಿಗೆ ಮೂಲ ಸೌಲಭ್ಯ ಕಲ್ಪಿಸುವ ಕುರಿತು 28 .25 ಲಕ್ಷ ರು. ವೆಚ್ಚದ ಯೋಜನೆಯ ಅಂದಾಜು ಪಟ್ಟಿ ಪ್ರಸ್ತಾವನೆಯೊಂದಿಗೆ ಸಲ್ಲಿಸಲಾಗಿತ್ತು.

ಅಲ್ಲದೇ, ಮಳವಳ್ಳಿ ಮತ್ತು ಮದ್ದೂರು ಜನರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸ್ಥಾಪನೆ ಬಗ್ಗೆ ಸಹ ನ್ಯಾಯಾಧೀಶ ಭೇಟಿ ವೇಳೆ ಚರ್ಚೆ ನಡೆಯಿತು. ಹೈಕೋರ್ಟ್ ನಾ 5 ಮಂದಿ ಹಿರಿಯ ನ್ಯಾಯಾಧೀಶರ ಸಮಿತಿ ಮುಂದೆ ಚರ್ಚೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುನಿಲ್ ದತ್ ಸ್ಥಳ ಪರಿಶೀಲನೆ ನಡೆಸಿದರು. ನಂತರ ನ್ಯಾಯಮೂರ್ತಿಗಳಾದ ಸುನಿಲ್ ದತ್ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತೆರಳಿ ಆಡಳಿತಾತ್ಮಕ ವಿಷಯಗಳ ಕುರಿತು ಕೆಲ ಕಾಲ ನ್ಯಾಯಾಧೀಶರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ ನ್ಯಾಯಾಲಯಗಳ ಮತ್ತು ವಕೀಲ ಸಂಘಗಳಕಟ್ಟಡಗಳ ವೀಕ್ಷಣೆ ಮಾಡಿದರು.

ಈಡೇರಿದ ಎಸ್.ಎಂ ಕೃಷ್ಣರ ಕನಸು:

ಪಟ್ಟಣದಲ್ಲಿ ಹೈಕೋರ್ಟ್ ಮಾದರಿ ನ್ಯಾಯಾಲಯ ನಿರ್ಮಾಣವಾಗಬೇಕೆಂಬ ಉದ್ದೇಶ ಹೊಂದಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಅಂದು ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಯಡಿಯೂರಪ್ಪ ಅವರು ರೇಷ್ಮೆ ಇಲಾಖೆಗೆ ಸೇರಿದ4. 35 ಎಕರೆ ಜಮೀನನ್ನು ನ್ಯಾಯಾಲಯಸಂಕೀರ್ಣ ನಿರ್ಮಾಣಕ್ಕೆ ಮಂಜೂರು ಮಾಡಿದ್ದರು.

ನ್ಯಾಯಾಲಯದ ಸಂಕೀರ್ಣ ಸ್ಥಳ ವೀಕ್ಷಣೆಗೆ ಆಗಮಿಸಿದ್ದ ಹೈಕೋರ್ಟಿನ ನ್ಯಾಯಮೂರ್ತಿ ಎಸ್ .ಸುನಿಲ್ ದತ್ ಯಾದವ್ ಅವರನ್ನು ಜಿಲ್ಲಾ, ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯಿಂದ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಬೆಂಗಳೂರಿಂದ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ನ್ಯಾಯಮೂರ್ತಿಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ, ಎಎಸ್ಪಿ ತಿಮ್ಮಯ್ಯ, ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಹರಿಣಿ, ಎಸ್.ಸಿ.ನಳಿನ, ಕೆ.ಗೋಪಾಲಕೃಷ್ಣ, ಎನ್.ಬಿ.ಮೋಹನ್ ಕುಮಾರಿ, ಸಿ.ಎಂ.ಪಾರ್ವತಿ, ಕರ್ನಾಟಕ ವಕೀಲರ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಸಿ.ಶಿವರಾಂ, ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಮ್ ದೇವಿಡ್, ಕಪನಿ ನಂಜೇಶ್ವರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ , ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಸುಮಂತ್ ಸೇರಿದಂತೆ ಸಂಘದ ಪದಾಧಿಕಾರಿಗಳು ನ್ಯಾಯಮೂರ್ತಿಗಳಿಗೆ, ಹೂಗುಚ್ಚ ಅಭಿನಂದಿಸಿದರು.

ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ನಗರಸಭಾ ಪೌರಾಯುಕ್ತ ರಾಜ ರಾಧಿಕಾ, ಡಿವೈಎಸ್ಪಿ ಯಶವಂತ ಕುಮಾರ್. ವೃತ್ತ ನಿರೀಕ್ಷಕರಾದ ನವೀನ್, ನಾರಾಯಣಿ, ಲೋಕೋಪಯೋಗಿ ಇಲಾಖೆ ದೇವಾನಂದ್ ಮತ್ತಿತರರು ಇದ್ದರು.