ಸಾರಾಂಶ
ಗುಂಡ್ಲುಪೇಟೆಯ ಸರ್ಕಾರಿ ಪಶು ಆಸ್ಪತ್ರೆ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ 4 ಪಶು ಆಸ್ಪತ್ರೆ ಮಂಜೂರಾಗಿವೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರದ ಅವಧಿಯಲ್ಲಿ ವಿಧಾನ ಸಭಾ ಕ್ಷೇತ್ರದ ಸೋಮಹಳ್ಳಿ, ತೆರಕಣಾಂಬಿ, ಹೊನ್ನೇಗೌಡನಹಳ್ಳಿ ಹಾಗೂ ಮಲೆಯೂರು ಗ್ರಾಮಕ್ಕೆ ಪಶು ಆಸ್ಪತ್ರೆಗಳು ಮಂಜೂರಾಗಿರುವುದು ಸೌಭಾಗ್ಯ ಎಂದರು.ಖುಷಿ ತಂದಿದೆ:ನಗರ ಪ್ರದೇಶದಲ್ಲಿ ವಿವಿಧ ಬಗೆಯ ಶ್ವಾನಗಳನ್ನು ನೋಡುತ್ತಿದ್ದೇವು. ಆದರೆ ನನ್ನ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಬಗೆಯ ಶ್ವಾನಗಳಿರುವುದು ಖುಷಿ ತಂದಿದೆ ಹಾಗೂ ನಾಯಿ ನಿಯತ್ತಿಗೆ ಹೆಸರಾದ ಪ್ರಾಣಿ ಎಂದು ಹೇಳಿದರು. ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ನಮ್ಮ ಜಿಲ್ಲೆಯ ಸಚಿವರಾಗಿರುವುದರಿಂದ ಇನ್ನು ಹೆಚ್ಚಿನ ಸೌಲಭ್ಯ ಕೊಡಿಸುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ನಾಯಿ ಸಾಕಲು ಸಲಹೆ: ನನಗೂ ನಾಯಿ ಸಾಕಲು ಹಲವರು ಹೇಳಿದ್ದಾರೆ. ನಾನು ಶಾಸಕನಾದ ಕಾರಣ ಹೆಚ್ಚಿನ ಜನರು ಮನೆಗೆ ಬರುವದರಿಂದ ನಾಯಿಯೊಂದಿಗೆ ಸಮಯ ಕೊಡಲು ಸಾಧ್ಯವಿಲ್ಲ. ಹಾಗಾಗಿ ತೋಟದ ಮನೆಯಲ್ಲಿ ನಾಯಿ ಸಾಕುವ ಮನಸ್ಸು ಬಂದಿದೆ. ನಾಯಿ ಮೇಲೆ ನನಗೂ ವಿಶೇಷ ಪ್ರೀತಿಯಿದೆ ಎಂದರು. ಹಸು, ಕುರಿ, ಮೇಕೆ ಸಾವಿಗೆ ಹೆಚ್ಚಿನ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ ಎಂದರು. ಈ ಸಮಯದಲ್ಲಿ ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಹನುಮಗೌಡ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ಎಪಿಎಂಸಿ ಅಧ್ಯಕ್ಷ ಬಸವರಾಜು, ಪುರಸಭೆ ಸದಸ್ಯರಾದ ರಾಜಗೋಪಾಲ್, ಎನ್.ಕುಮಾರ್, ಮುಖಂಡರಾದ ಕೆ.ಎಂ.ಮಾದಪ್ಪ, ಕಾರ್ಗಳ್ಳಿ ಸುರೇಶ್, ಪಶು ಮುಖ್ಯಾಧಿಕಾರಿ ಡಾ.ಬಿ.ಎಚ್.ಮೋಹನ್ ಕುಮಾರ್ ಸೇರಿದಂತೆ ಹಲವರಿದ್ದರು.