ರನ್ನ ಸಾಂಸ್ಕೃತಿಕ ವೈಭವ ಅದ್ಧೂರಿಗೆ 4 ಕೋಟಿ ಪ್ರಸ್ತಾವ: ಸಚಿವ ಆರ್.ಬಿ.ತಿಮ್ಮಾಪೂರ

| Published : Jan 12 2025, 01:20 AM IST

ರನ್ನ ಸಾಂಸ್ಕೃತಿಕ ವೈಭವ ಅದ್ಧೂರಿಗೆ 4 ಕೋಟಿ ಪ್ರಸ್ತಾವ: ಸಚಿವ ಆರ್.ಬಿ.ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಒಟ್ಟು 23 ಸಮಿತಿ ರಚಿಸಲಾಗಿದೆ. ಪ್ರತಿಯೊಂದು ಸಮಿತಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಇತರರು ಸದಸ್ಯರಾಗಿರುತ್ತಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ಫೆ.22ರಿಂದ ಮೂರು ದಿನಗಳವರೆಗೆ ಮುಧೋಳ ಮತ್ತು ಬೆಳಗಲಿ ಗ್ರಾಮದಲ್ಲಿ ರನ್ನ ಸಾಂಸ್ಕೃತಿಕ ವೈಭವ (ಹಬ್ಬ) ಆಚರಿಸಲು ಈಗಾಗಲೇ ಭರದ ಸಿದ್ಧತೆ ನಡೆದಿದೆ. ಅಂದಾಜು ₹4 ಕೋಟಿ ಅನುದಾನದ ಬೇಡಿಕೆಯನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ರನ್ನ ಪ್ರತಿಷ್ಠಾನ, ವಿವಿಧ ಪರಿಷತ್‌ಗಳ ಸದಸ್ಯರ ಮತ್ತು ನಗರದ ಪ್ರಮುಖರ ಸಭೆಯೊಂದನ್ನು ಕರೆದು ಅವರ ಸಲಹೆ ಸೂಚನೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರನ್ನ ಪ್ರತಿಷ್ಠಾನ ಸದಸ್ಯರ ಹಾಗೂ ಕಸಾಪ ಸದಸ್ಯರ ಜೊತೆ ಜಿಲ್ಲಾ ಮಟ್ಟದ ಸಭೆ ನಡೆಸಿ ಚರ್ಚಿಸಲಾಗಿದೆ. ರನ್ನ ಸಾಂಸ್ಕೃತಿಕ ವೈಭವ ಅದ್ಧೂರಿಯಾಗಿ ಆಚರಿಸಲು ಏನೇನು ಮಾಡಬೇಕೆಂಬುದರ ಕುರಿತು ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆದುಕೊಂಡ ನಂತರ ಸ್ವಾಗತ, ಸಲಹಾ, ಕಾರ್ಯಕಾರಣಿ, ಆಹಾರ, ಹಣಕಾಸು, ಸಾರಿಗೆ, ವಸತಿ, ಪ್ರಚಾರ, ಮೂಲಸೌಲಭ್ಯ, ಜನಪದ, ಕವಿಗೋಷ್ಠಿ, ವಸ್ತು ಪ್ರದರ್ಶನ, ಕಾನೂನು, ರಥಯಾತ್ರೆ, ಸ್ತಬ್ಧಚಿತ್ರ ಸಮಿತಿ ಹೀಗೆ ಒಟ್ಟು 23 ಸಮಿತಿ ರಚಿಸಲಾಗಿದೆ. ಪ್ರತಿಯೊಂದು ಸಮಿತಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಇತರರು ಸದಸ್ಯರಾಗಿರುತ್ತಾರೆಂದು ಸಚಿವರು ಹೇಳಿದರು.

ಮೂರು ದಿನಗಳವರೆಗೆ ನಡೆಯುವ ಈ ಉತ್ಸವವನ್ನು ಒಂದು ದಿನ ಬೆಳಗಲಿ ಗ್ರಾಮದಲ್ಲಿ, ಇನ್ನೆರಡು ದಿನ ಮುಧೋಳದಲ್ಲಿ ನಡೆಸುವುದರ ಕುರಿತು ತಿರ್ಮಾನಿಸಲಾಯಿತು. ಸಿಎಂ, ಡಿಸಿಎಂ, ಸಚಿವರು, ಸಂಸದರು, ಶಾಸಕರು, ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಸಾಹಿತಿಗಳು, ಕಲಾವಿದರು, ನಟರನ್ನು ಅಹ್ವಾನಿಸಲಾಗುತ್ತದೆ. ಪಕ್ಷಾತೀತ, ಜಾತ್ಯಾತೀತ ರನ್ನ ವೈಭವ ಇದಾಗಿದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗುವುದು. ನಗರದೆಲ್ಲೆಡೆ ವಿದ್ಯುತ್ ದೀಪಾಲಂಕಾರ, 50ಕ್ಕೂ ಹೆಚ್ಚು ಕಲಾತಂಡಗಳಿಂದ ಬೃಹತ್ ಪ್ರಮಾಣದ ಸಾಂಸ್ಕೃತಿಕ ಮೆರವಣಿಗೆ, ರನ್ನನ ಕುರಿತು ಪ್ರದರ್ಶನ, ಧಾರವಾಡ ರಂಗಾಯಣ ತಂಡದವರಿಂದ ಗದಾಯುದ್ಧ ನಾಟಕ ಪ್ರದರ್ಶನ, ಜನಪದ ಕಲಾ ತಂಡಗಳಿಂದ ವಿಶೇಷ ಕಾರ್ಯಕ್ರಮ, ಸಂಗೀತ ಗೋಷ್ಠಿ, ರನ್ನ ಪ್ರಶಸ್ತಿ ಪ್ರಧಾನ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಹೀಗೆ ಹತ್ತು ಹಲವು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದು ತಿಳಿಸಿದ ಅವರು, ಇದೊಂದು ಪೂರ್ವಭಾವಿ ಸಭೆಯಾಗಿದ್ದು ಇನ್ನೂ ನಾಲ್ಕೈದು ಸಭೆ ಕರೆದು ಅಂತಿಮವಾಗಿ ಏನೇನು ಕಾರ್ಯಕ್ರಮಗಳಿವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗುವುದು ಎಂದರು.

ರನ್ನ ಪ್ರತಿಷ್ಠಾನದ ಸದಸ್ಯರು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಪರಿಷತ್‌ಗಳ ಪದಾಧಿಕಾರಿಗಳು, ಸಾಹಿತಿಗಳು, ನಗರಸಭೆ ಸದಸ್ಯರು, ನಗರದ ಪ್ರಮುಖರು ಸಭೆಯಲ್ಲಿದ್ದರು.