ಹೊಸಕೋಟೆ: ಮಳೆ ಕೊರತೆಯಿಂದ ಬರದ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಹೊಸಕೋಟೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ 4 ಕೋಟಿ ವೆಚ್ಚದಲ್ಲಿ ನೀರು ಪೂರೈಕೆ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು
ಹೊಸಕೋಟೆ: ಮಳೆ ಕೊರತೆಯಿಂದ ಬರದ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಹೊಸಕೋಟೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ 4 ಕೋಟಿ ವೆಚ್ಚದಲ್ಲಿ ನೀರು ಪೂರೈಕೆ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಫಾತಿಮಾ ಕಾನ್ವೆಂಟ್ ಬಳಿ 7 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿ ಹಾಗೂ ಬಾಲಾಜಿ ಲೇಔಟ್ ಸಮೀಪದ ಪೆತ್ತನಹಳ್ಳಿ ಕೆರೆ ಅಂಗಳದಲ್ಲಿ 8 ಲಕ್ಷ ಲೀಟರ್ ಸಾಮರ್ಥ್ಯದ ಎರಡು ನೀರಿನ ತೊಟ್ಟಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮನೆಗಳು ಹಾಗೂ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಸಂತೆ ಸರ್ಕಲ್‌ನ ಚಿಕ್ಕಕೆರೆ ಪ್ರದೇಶದಲ್ಲಿ ಸುಮಾರು 7 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ಹೊಂಡ ನಿರ್ಮಿಸಲಾಗಿದ್ದು, ಸುಮಾರು 12 ಕೊಳವೆಬಾವಿಗಳಿಂದ ನೀರನ್ನು ಹೊಂಡಕ್ಕೆ ತುಂಬಿಸಿ ಹಳೆ ನಗರದ ವಿವಿಧ ಬಡಾವಣೆಗಳಿಗೆ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ನಗರದ ಎಕ್ಸ್ಟೆನ್ಷನ್ ಪ್ರದೇಶಕ್ಕೆ ನೀರು ಪೂರೈಸುವ ಉದ್ದೇಶದಿಂದ ಪೆತ್ತನಹಳ್ಳಿ ಕೆರೆ ಪ್ರದೇಶದಲ್ಲಿ ಸುಮಾರು 8 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ಹೊಂಡ ನಿರ್ಮಿಸಲಾಗುತ್ತಿದೆ. ಇದಕ್ಕೆ ನೀರು ತುಂಬಿಸಲು ಸುಮಾರು 18 ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದರು.
ಕಳೆದ ಒಂದೂವರೆ ತಿಂಗಳಲ್ಲಿ ಒಟ್ಟು ಸುಮಾರು 30 ಹೊಸ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಒಟ್ಟಾರೆ 15 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ವ್ಯವಸ್ಥೆ ಮೂಲಕ ನಗರದಲ್ಲಿ ನೀರಿನ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ಪೂರೈಕೆಗಾಗಿ ಇತ್ತೀಚೆಗೆ ಕೈಗೊಂಡಿರುವ ಕೊಳವೆಬಾವಿ ಕಾಮಗಾರಿಗಳಿಗೇ ಸುಮಾರು 2 ಕೋಟಿ ವೆಚ್ಚವಾಗಿದ್ದು, ಕೃಷಿ ಹೊಂಡ, ಪೈಪ್‌ಲೈನ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಸೇರಿಸಿದರೆ ಒಟ್ಟು ಸುಮಾರು 4 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.ಚಿಕ್ಕಕೆರೆಗೆ ನೀರು ತುಂಬಿಸುವ ಸಿದ್ಧತೆ:
ಮಳೆ ಅಭಾವದ ಹಿನ್ನೆಲೆಯಲ್ಲಿ ಚಿಕ್ಕಕೆರೆಗೆ ನೀರು ಹರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಕೋಲಾರ ಭಾಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಗಳವಾರ ಅಥವಾ ಬುಧವಾರದೊಳಗೆ ಚಿಕ್ಕಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರಗಾಲದ ಸಂದರ್ಭದಲ್ಲಿ ನಗರ ನಿವಾಸಿಗಳಿಗೆ ಯಾವುದೇ ರೀತಿಯ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಹೊಸಕೋಟೆ ನಗರಕ್ಕೆ ಸಮರ್ಪಕ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಸುಮಾರು 2 ತಿಂಗಳಿನಿಂದ ನಿರಂತರವಾಗಿ ಶ್ರಮ ಹಾಕಿ ಹೊಸ ಕೊಳವೆ ಬಾವಿಗಳನ್ನು ಕೊರೆಸಿ, ನೀರಿನ ತೊಟ್ಟಿಗಳನ್ನು ನಿರ್ಮಿಸುವ ಮೂಲಕ ಉದ್ಘಾಟನೆ ಮಾಡಲಾಗಿದೆ. ವಿನಾಕಾರಣವಾಗಿ ವಿಪಕ್ಷಗಳು ನೀರು ಸರಬರಾಜು ವಿಚಾರವಾಗಿ ರಾಜಕೀಯ ಹೇಳಿಕೆಗಳನ್ನು ಕೊಡುತ್ತಾರೆ. ಅಂತಹ ಮಾತಗಳಿಗೆ ಜನ ಕಿವಿಗೊಡಬಾರದು ಎಂದರು.
ಈ ವೇಳೆ ಟೌನ್ ಕಾಂಗ್ರೆಸ್ ಅದ್ಯಕ್ಷ ಬಿ.ವಿ.ಭೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಮಾಜಿ ಅದ್ಯಕ್ಷರಾದ ಡಾ.ಸಿ.ಜಯರಾಜ್, ವಿಜಯ್‌ಕುಮಾರ್ ಹಾಜರಿದ್ದರು.ಫೋಟೋ: 2 ಹೆಚ್‌ಎಸ್ ಕೆ 2 ಮತ್ತು 3
ಹೊಸಕೋಟೆ ನಗರದ ಫಾತಿಮಾ ಶಾಲೆ ಬಳಿ ನಿರ್ಮಿಸಿರುವ 7 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿಯನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.3:
ಹೊಸಕೋಟೆ ತಾಲೂಕಿನ ಪೆತ್ತನಹಳ್ಳಿ ಕೆರೆ ಅಂಗಳದಲ್ಲಿ ನಿರ್ಮಿಸಿರುವ ನೀರಿನ ತೊಟ್ಟಿಯನ್ನು ಶಾಸಕ ಶರತ್ ಬಚ್ಚೇಗೌಡ ಪರಿಶೀಲಿಸಿದರು. ಟೌನ್ ಕಾಂಗ್ರೆಸ್ ಅದ್ಯಕ್ಷ ಬಿ.ವಿ.ಭೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಮಾಜಿ ಅದ್ಯಕ್ಷರಾದ ಡಾ.ಸಿ.ಜಯರಾಜ್, ವಿಜಯ್‌ಕುಮಾರ್ ಹಾಜರಿದ್ದರು.