ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಭೀಮನಗರದಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನು ನಾಲ್ಕು ದಿನಗಳ ಕಾಲ ವಿಶೇಷ ಹಾಗೂ ವಿಭಿನ್ನವಾಗಿ ಭೀಮನಗರದ ಕುಲಸ್ಥರು, ಮುಖಂಡರು, ಯಜಮಾನರು, ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಗ್ರಾಮಗಳ ಸಮಾಜದ ನಾಯಕರ ಸಹಕಾರದೊಂದಿಗೆ ಆಚರಿಸಲು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಪ್ರವಾಸಿ ಮಂದಿರದಲ್ಲಿ ತಾಲೂಕಿನ ದಲಿತ ಸಮಾಜದ ಮುಖಂಡರು, ಗಣ್ಯರ ಸಮ್ಮುಖದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅನೇಕ ಮುಖಂಡರು ಮಾತನಾಡಿ, 4 ದಿನಗಳ ಕಾರ್ಯಕ್ರಮ ಉತ್ತಮ ರೀತಿ ನಡೆಯಲು ಸಹಕರಿಸುವ ಭರವಸೆ ನೀಡಿದರು.
11 ರಂದು ಸಂಜೆ 5 ಗಂಟೆಗೆ ಮಾತೆ ಸಾವಿತ್ರಿಬಾಯಿಪುಲೆ ಜ್ಞಾನ ಮಂದಿರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಕಾನೂನು ಅರಿವು ಕಾರ್ಯಕ್ರಮ, ಏ.12 ರಂದು ಬೆಳಗ್ಗೆ 9 ಗಂಟೆಗೆ ಭೀಮನಗರದ ವೈದ್ಯರ ಬಳಗದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಅಯೋಜಿಸಲಾಗಿದೆ ಎಂದರು. ಅಲ್ಲದೆ ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಭೀಮನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಏ.13 ರಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಂಗಕರ್ಮಿ ಗಿರೀಶ್ ಮಾಚಳ್ಳಿ ಅವರ ತಂಡದಿಂದ ಮನಸ್ಮೃತಿ ವಿರುದ್ಧ ಸಂವಿಧಾನ ಎಂಬ ನಾಟಕ, ಏ.14 ರಂದು ಬೆಳಗ್ಗೆ ರಂಗೋಲಿ ಸ್ಪರ್ಧೆ, ಸಂಜೆ 5 ಗಂಟೆಗೆ ಭೀಮ ಗೀತಾ ಗಾಯನ, ಪ್ರತಿಭಾ ಪುರಸ್ಕಾರ, ಭೀಮನಗರದ ಜಾನಪದ ಕಲಾವಿದರಿಗೆ, ಅತಿಥಿ ಗಣ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ಸಾಂಘವಾಗಿ ಜರುಗಲಿದೆ ಎಂದರು.ತಾಲೂಕಿನ ಎಲ್ಲಾ ಗ್ರಾಮದ ದಲಿತ ಮುಖಂಡರು ತಪ್ಪದೇ ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ದೊಡ್ಡ ಯಜಮಾನ ಚಿಕ್ಕಮಾಳಿಗೆ ಮನವಿ ಮಾಡಿದರು.
ದೊಡ್ಡ ಯಜಮಾನ ಚಿಕ್ಕಮಾಳಿಗೆ ಮಾತನಾಡಿ, ಜಯಂತಿ ಮುಕ್ತಾಯಗೊಳ್ಳುತ್ತಿದ್ದಂತೆ ಕಳೆದ 22 ವರ್ಷದ ಹಿಂದೆ ಆರಂಭಗೊಂಡ ಅಂಬೇಡ್ಕರ್ ಭವನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲು ಭೀಮನಗರದ ಮುಖಂಡರು ಕಡ್ಡಾಯವಾಗಿ ಮುಂದಾಗಬೇಕು. ತಾಲೂಕಿನ ಎಲ್ಲಾ ಗ್ರಾಮದಲ್ಲಿರುವ ದಲಿತ ಮುಖಂಡರು ಹಾಗೂ ಅಂಬೇಡ್ಕರ್ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಒಕ್ಕೂಟ ರಚಿಸಬೇಕು ಮತ್ತು ಮುಂದೆ ದಲಿತ ಸಮುದಾಯದ ಹಾಗೂ ಅಂಬೇಡ್ಕರ್ ಅವರ ಎಲ್ಲಾ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿಯೇ ನಡೆಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.ಸಭೆಯಲ್ಲಿ ಅಂಬೇಡ್ಕರ್ ಜಯಂತಿ ಸಮಿತಿಯ ಆಚರಣಾ ಸಂಚಾಲಕ ಎಲ್.ಲಿಂಗರಾಜು, ವರದರಾಜು, ಸನತ್‌ಕುಮಾರ್, ಸಿದ್ಧಾರ್ಥ, ನಟರಾಜ್ ಮಾಳಿಗೆ, ಎಂ.ನಟರಾಜು, ಪುಟ್ಟಬುದ್ಧಿ, ಸಿ.ನಾಗರಾಜು, ನಿಂಪು ರಾಜೇಶ್, ಶಿವರಾಳ, ಎಸ್.ಆನಂದಮೂರ್ತಿ, ಎಸ್.ದಿಲಿಪ್, ಎಸ್.ಸಿದ್ದಪ್ಪಾಜಿ, ಶಂಕರ್, ಕಿರಣ್, ದೇವಾನಂದ್, ದಲಿತ ಮುಖಂಡರಾದ ಬಸ್ತಿಪುರ ಪ್ರಕಾಶ್, ಎಂ.ಪ್ರಸನ್ನ, ರವಿ, ಕುಣಗಳ್ಳಿ ಶ್ರೀನಿವಾಸಮೂರ್ತಿ, ಹೊಂಡರಬಾಳು ಚನ್ನರಾಜು, ಸಿದ್ದಯ್ಯನಪುರದ ಲಕ್ಷ್ಮಣಮೂರ್ತಿ, ಮುರಳಿ, ಸತ್ತೇಗಾಲದ ಅವಿನಾಶ್, ಸರಗೂರು ಶಿವಶಂಕರ್, ಧನಗೆರೆ ಮಹದೇವ, ಹರಳೆ ಮಹದೇವ, ಮುಳ್ಳೂರು ಪ್ರಭು, ಗುಂಡೇಗಾಲದ ಪುಟ್ಟಸ್ವಾಮಿ, ಹಳೇ ಹಂಪಾಪುರದ ನಿಂಗರಾಜು, ಹೊಸ ಅಣಗಳ್ಳಿ ಬಸವರಾಜು, ಜಗದೀಶ ಇನ್ನಿತರರಿದ್ದರು.