ಕನ್ನಡಪ್ರಭ ವಾರ್ತೆ ತುಮಕೂರುವೀರಲೋಕ ಪುಸ್ತಕ ಸಂತೆಯ ೫ನೇ ಆವೃತ್ತಿಯನ್ನು ಜೂನ್ 26 ರಿಂದ 29ರವರೆಗೆ 4 ದಿನಗಳ ಕಾಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಕು ಮೈದಾನದಲ್ಲಿ ಏರ್ಪಡಿಸಲಾಗಿದೆ.ಎಂದು ಪುಸ್ತಕ ಸಂತೆಯ ರೂವಾರಿ ಉದ್ಯಮಿ, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್ ಹೇಳಿದರು.ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕೇವಲ ಒಂದು ಪುಸ್ತಕ ಮೇಳವಲ್ಲ, ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಸಂಚಲನವನ್ನು ಉಂಟುಮಾಡಿದ ಪುಸ್ತಕ ಚಳುವಳಿ. ಪ್ರತಿಯೊಂದು ಜಿಲ್ಲೆಯಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ವೀರಲೋಕ ಪುಸ್ತಕ ಸಂತೆಗೆ ಕನ್ನಡಿಗರ ಮನಸ್ಸಿನಲ್ಲಿ ಒಂದು ವಿಶಿಷ್ಟ ಸ್ಥಾನ ಮತ್ತು ಗೌರವ ಇದೆ. ಈ ಪುಸ್ತಕ ಸಂತೆಯಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾತ್ರವಲ್ಲದೆ, ಓದುಗರ ಮತ್ತು ಲೇಖಕರ ಸಂವಾದ ವೇದಿಕೆ ಇರುತ್ತದೆ. ಓದುಗರು ತಮ್ಮ ಮೆಚ್ಚಿನ ಲೇಖಕರನ್ನು ಭೇಟಿಯಾಗಿ ಮಾತನಾಡಬಹುದು, ಲೇಖಕರು ಮತ್ತು ಓದುಗರನ್ನು ಮುಖಾಮುಖಿಯಾಗಿಸುವ ವೇದಿಕೆಯೂ ಆಗಿದೆ ಎಂದರು.

ಮೊದಲ ಪುಸ್ತಕ ಸಂತೆಯನ್ನು ಬೆಂಗಳೂರಿನ ಎಚ್‌ಎಸ್‌ಆರ ಲೇಔಟ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಎರಡು ಮತ್ತು ಮೂರನೇ ಸಂತೆಯು ಬೆಂಗಳೂರಿನ ಜಯನಗರದಲ್ಲಿ ನಡೆಯಿತು. ಅದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಮೂರು ಕೋಟಿಗೂ ಹೆಚ್ಚು ಮೌಲ್ಯದ ಪುಸ್ತಕಗಳು ಮಾರಾಟವಾಗಿದ್ದು, ಪ್ರಕಾಶಕರು ಅತ್ಯಂತ ಸಂತೋಷಪಟ್ಟರು. ನಾಲ್ಕನೇ ಪುಸ್ತಕ ಸಂತೆಯು ಗಡಿಭಾಗದ ಜಿಲ್ಲೆಯಾದ ಬೀದರಿನಲ್ಲಿ ನಡೆಯಿತು. ಕಳೆದ 30 ವರ್ಷಗಳಲ್ಲಿ ಅಲ್ಲಿ ಯಾವುದೇ ದೊಡ್ಡ ಸಾಹಿತ್ಯ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಪುಸ್ತಕ ಸಂತೆಯಿಂದ 50,000ಕ್ಕೂ ಹೆಚ್ಚು ಜನರನ್ನು ಸೆಳೆದಿದ್ದೇವೆ. ಇದು ಆ ಜಿಲ್ಲೆಗೆ ತಂದ ಬದಲಾವಣೆ ಎಂದು ಹೇಳಿದರು.ತುಮಕೂರಿನ ಪುಸ್ತಕ ಸಂತೆಯಲ್ಲಿ 20 ಗೋಷ್ಠಿಗಳಿರುತ್ತವೆ. ಪ್ರಕಾಶಕರು ಸುಮಾರು 60 ಕ್ಕೂ ಹೆಚ್ಚು ಮಳಿಗೆ ತೆರೆಯುವರು. ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಲೇಖಕರೊಂದಿಗೆ ಚರ್ಚೆಗಳು ನಡೆಯುತ್ತವೆ. ಇಂದಿನ ಪ್ರಸ್ತುತ ವಿಷಯಗಳ ಬಗ್ಗೆ ಸಂವಾದಗಳು ಇರುತ್ತವೆ. ಪುಸ್ತಕ ಖರೀದಿಗೆ ಬರುವವರು ಜ್ಞಾನವನ್ನೂ ಪಡೆದುಕೊಳ್ಳಬಹುದು. ಸಂಜೆ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಕುಟುಂಬದೊಂದಿಗೆ ಬಂದವರು ಖರೀದಿ ಮಾಡುವುದರ ಜೊತೆಗೆ ಸಮಯವನ್ನು ಸಾರ್ಥಕವಾಗಿ ಕಳೆಯಬಹುದು. ಇದು ಒಂದು ವೀಕೆಂಡ್ ಫ್ಯಾಮಿಲಿ ಡೆಸ್ಟಿನೇಶನ್ ಆಗಿರುತ್ತದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಪುಸ್ತಕ ಓದುವ ಸಂಸ್ಕೃತಿ ಬೆಳೆಸುವಲ್ಲಿ ಪುಸ್ತಕ ಸಂತೆ ಸಹಕಾರಿಯಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಪುಸ್ತಕ ಸಂತೆಯಲ್ಲಿ ಹೆಚ್ಚು ಪಾಲ್ಗೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿ ಮನೆಯಲ್ಲೂ ದೇವರ ಮನೆಯಂತೆ ಪುಸ್ತಕ ಮನೆ ಮಾಡಿ ಪುಟ್ಟ ಗ್ರಂಥಾಲಯ ಹೊಂದಬೇಕು. ಪುಸ್ತಕ ಸಂತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಒಂದು ಪುಸ್ತಕ ಮಳಿಗೆ ತೆರೆಯಲಾಗುವುದು ಎಂದು ಹೇಳಿದರು.ತುಮಕೂರು ಪುಸ್ತಕ ಸಂತೆ ಸಂಘಟಕರಾದ ಆರ್.ಕೆ. ಶ್ರೀನಿವಾಸ್, ಪೃಥ್ವಿಕುಮಾರ್, ಬೀದರ್‌ನ ಗುರುನಾಥ ರಾಜಗೀರಾ, ವೀರಲೋಕದ ವ್ಯವಸ್ಥಾಪಕ ಅನಂತ ಕುಣಿಗಲ್, ಮಾಚೇನಹಳ್ಳಿ ನವೀನ್, ಕಿರಣ್‌ಕೃಷ್ಣ ಹಾಜರಿದ್ದರು.